ರಾಜ್ಯದಲ್ಲಿ ಚಿಕನ್‌, ಫಿಶ್‌, ಕಬಾಬ್‌ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯಾದ್ಯಂತ ಕಬಾಬ್‌, ಫಿಶ್‌, ಚಿಕನ್‌ಗೆ ಕೃತಕ ಬಣ್ಣ ಬಳಕೆಗೆ ನಿರ್ಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಬಾಬ್‌, ಫಿಶ್‌, ಚಿಕನ್‌ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿದೆ.

ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ, ಬಾಂಬೆ ಮಿಠಾಯಿಗೆ ಕಲರ್‌ ಹಾಕುವುದನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಕಬಾಬ್‌ ಸರದಿಯಾಗಿದೆ.

ಕೃತಕ ಬಣ್ಣದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿತ್ತು.

ರಾಜ್ಯಾದ್ಯಂತ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದಾಗ, ಅದರಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ – 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿಗಳಲ್ಲಿ ಕಂಡುಬಂದಿದೆ. ಹೀಗಾಗಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ಸೂಚಿಸಿದೆ.

ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತವೆ. ಈ ಹಿನ್ನೆಲೆಯಲ್ಲಿ ಕಬಾಬ್‌ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ. ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶಿಸಿದೆ. ಒಂದು ವೇಳೆ ಕೃತಕ ಬಣ್ಣಗಳನ್ನು ಬಳಸಿರುವುದು ಕಂಡುಬಂದಲ್ಲಿ ತಯಾರಿಸುವವರ ಮೇಲೆ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!