ಸಲಿಂಗ ಕಾಮ ತಪ್ಪಲ್ಲ, ಸೂರಜ್ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ: ದಿನೇಶ್ ಗುಂಡೂರಾವ್

ಹೊಸದಿಗಂತ ವರದಿ, ಮಡಿಕೇರಿ:

ಸೆಕ್ಷನ್ 377ರ ಪ್ರಕಾರ ಸಲಿಂಗ ಕಾಮ ಈಗ ತಪ್ಪಲ್ಲ. ಆದರೆ ಒತ್ತಡ ಮಾಡಿ ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಆಗಿದ್ದರೆ ಅದು ತಪ್ಪು. ಸೂರಜ್ ರೇವಣ್ಣ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈಗ ಅವರ ವಿರುದ್ಧ ದೂರು ಇರುವುದು ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಮಾಡಿದ್ದಾರೆಂದು. ಕಾನೂನು ಪ್ರಕಾರ ಎಲ್ಲರೂ ಒಂದೇ ಅಲ್ಲವೇ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರಜ್ ರೇವಣ್ಣ ವಿಚಾರದಲ್ಲಾಗಲಿ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಾಗಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಬ್ಯಾಕ್ ಟು ಬ್ಯಾಕ್ ಅಂದರೆ ನಾವು ಸೃಷ್ಟಿ ಮಾಡಿದ್ದಲ್ಲ. ಬ್ಯಾಕ್ ಟು ಬ್ಯಾಕೋ ಇಲ್ಲ, ಫ್ರಂಟ್ ಟು ಫ್ರಂಟೋ ನಮಗೇನು ಗೊತ್ತು ಎಂದು ವ್ಯಂಗ್ಯವಾಡಿದರು.

ದೇವೇಗೌಡರ ಕುಟುಂಬ ನಾಶ ಮಾಡಲು ಹೀಗೆಲ್ಲ ಮಾಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸಚಿವ ದಿನೇಶ್ ಗುಂಡೂರಾವ್, ಅವರು ಗೆಲ್ಲಬೇಕು ಎಂದು ಅವರು, ನಾವು ಗೆಲ್ಲಬೇಕು ಎಂದು ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಆದರೆ ಇದನ್ನೆಲ್ಲ ವೈಯಕ್ತಿಕವಾಗಿ ಬೆಳೆಸಿಕೊಂಡರೆ ನಾವೇನು ಮಾಡೋಕಾಗಲ್ಲ. ರಾಜಕೀಯದಲ್ಲಿ ನಮ್ಮ ಎದುರಾಳಿಯನ್ನು ನಾವು ಎದುರಿಸಬೇಕು. ಯಾರೂ ನಮ್ಮ ಎದುರಾಳಿ ಗೆದ್ದುಕೊಂಡು ಹೋಗಲಿ ಎಂದು ಬಿಡುವುದಿಲ್ಲ. ಆದರೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವಂತಹದ್ದು ಏನೂ ಇಲ್ಲ. ಇದನ್ನೇ ವೈಯಕ್ತಿಕ ಪ್ರತಿಷ್ಠೆ ಮಾಡಿಕೊಂಡು ಜನರ ಅನುಕಂಪ ಪಡೆದುಕೊಳ್ಳುವ ಪ್ರಯತ್ನವಾಗುತ್ತಿದೆ ಎಂದು ನುಡಿದರು.

ಗ್ಯಾರಂಟಿ ನಿಲ್ಲುವುದಿಲ್ಲ: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು ರಾಜಕೀಯಕ್ಕಾಗಿ ಈ ಯೋಜನೆ ಜಾರಿಗೆ ತಂದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಬಡಜನರ ಹಿತಕ್ಕಾಗಿ ಜಾರಿ ಮಾಡಿದ್ದೇವೆ. ಚುನಾವಣೆಯಲ್ಲಿ ಮುನ್ನಡೆಯಾಗಲಿ, ಹಿನ್ನೆಡೆಯಾಗಲಿ ಎಂಬ ಕಾರಣಕ್ಕೆ ತಂದಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಬದಲಾಗಿ ಅದರಲ್ಲಿ ಇನ್ನೂ ವೈಜ್ಞಾನಿಕವಾಗಿ ಸುಧಾರಣೆ ತರಲು ಸಾಧ್ಯವಿದೆಯೇ ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗಿದೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮಂತ್ರಿಗಳಾಗಿ ದೆಹಲಿಗೆ ಹೋಗಿದ್ದಾರೆ. ಈಗಾಲಾದರೂ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ಅದರ ಬಗ್ಗೆ ಇವರು ವಕಾಲತ್ತು ವಹಿಸಲಿ. ಪ್ರತಿ ಸಲ ಜಿದ್ದಾಜಿದ್ದಿನ ರಾಜಕಾರಣ ಅಂತಾ ಮಾತನಾಡುವುದು ಬೇಡ. ಕುಮಾರಸ್ವಾಮಿಯವರು ಈಗ ಕೇಂದ್ರ ಸಚಿವರಾಗಿದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಜ್ಯದ ಪರವಾಗಿ ಕೆಲಸ ಮಾಡಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!