ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಬಹುತೇಕ ಯುವಕರು ಮತ್ತು ಮಧ್ಯಮ ವರ್ಗದ ಜನರು ಈ ಬೆಟ್ಟಿಂಗ್ ಆ್ಯಪ್ ಮಾರುಹೋಗಿ, ದುಡ್ಡು ಕಳಿದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಹೀಗಾಗಿ ಬಾಗಲಕೋಟೆಯ ಇಳಕಲ್ ನಗರದ ನಿವಾಸಿ ನೇಕಾರ ಮೇಘರಾಜ್ ಗುದ್ದಟ್ಟಿ ಆನ್‌ಲೈನ್ ಆ್ಯಪ್‌ಗಳನ್ನು ನಿಷೇಧಿಸಿ ಎಂದು ವಿಭಿನ್ನ ಅಭಿಯಾನ ಹಮ್ಮಿಕೊಂಡಿದ್ದಾರೆ.
ಜಗತ್ಪ್ರಸಿದ್ಧ ಇಳಕಲ್ ಸೀರೆಯ ಸೆರಗಿನಲ್ಲಿ, ‘ರಮ್ಮಿ ಮತ್ತು ಡ್ರೀಮ್ ಇಲೆವೆನ್ ಆಪ್‌ಗಳನ್ನು ಬ್ಯಾನ್ ಇನ್ ಇಂಡಿಯಾ ಪಿಎಂ ಮೋದಿ’ ಎಂದು ಭಾರತದ ಲಾಂಛನದ ಚಿತ್ರ ಸಹಿತ ನೈಗೇ ಮಾಡಿ ಆನ್‌ಲೈನ್ ಆ್ಯಪ್ ಬ್ಯಾನ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಮಧ್ಯಮ ವರ್ಗದ ಜನರ ಹಿತದೃಷ್ಟಿ ಹಾಗೂ ಆಪ್ ಹುಚ್ಚಿಗೆ ಬಿದ್ದು ಹಾಳಾಗುತ್ತಿರುವ ಯುವಕರ ತಾಯಂದಿರ ಪರವಾಗಿ ಈ ಸೀರೆಯನ್ನು ನೇಯ್ಗೆ ಮಾಡಿದ್ದೇನೆ. ಈ ಸೀರೆಯನ್ನು ಪ್ರಧಾನಿ ಮೋದಿಯವರ ಕಾರ್ಯಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಮೇಘರಾಜ್, ಇಳಕಲ್ ಸೀರೆಯಲ್ಲಿ ಆಯೋಧ್ಯೆಯ ಶ್ರೀರಾಮ ಮಂದಿರ, ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ್ದರು. ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದು ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು.