ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಗೇಮ್, ಬೆಟ್ಟಿಂಗ್ ಆ್ಯಪ್ಗಳನ್ನ ನಿಷೇಧಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ರ ಬರೆದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಅನೇಕ ಆನ್‌ಲೈನ್ ಗೇಮ್ಗಳನ್ನ ನಿಷೇಧಿಸಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದೀರಿ. ಈಗಲೂ ಅಂತದ್ದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಆರ್ಟಿಕಲ್ 370 ರದ್ದು ಸೇರಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡು ಧೈರ್ಯ ಪ್ರದರ್ಶಿಸಿದ್ದೀರಿ. ಆನ್ ಲೈನ್ ಗೇಮ್ಗೆ ಅಡಿಕ್ಟ್ ಆಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಆದ್ರೆ, ಆನ್‌ಲೈನ್ ಗೇಮ್ ಮಾಲೀಕರು ಲಾಭ ಪಡೆಯುತ್ತಿದ್ದಾರೆ. ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕುವಂತೆ ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದ್ದು, ನಿಮ್ಮ ನಿರ್ಧಾರದಿಂದ ನಮ್ಮ ರಾಜ್ಯಕ್ಕೆ ಒಳಿತಾಗಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪತ್ರದಲ್ಲೇನಿದೆ?
ಆನ್‌ಲೈನ್ ಗೇಮ್‌ಗಳು, ಬೆಟ್ಟಿಂಗ್ ಆ್ಯಪ್ಗಳು ಇಂದಿನ ಮಕ್ಕಳು ಹಾಗೂ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕೋವಿಡ್ ಸಮಯದಲ್ಲಿ ಅನೇಕ ಆನ್‌ಲೈನ್ ಗೇಮ್‌ಗಳು, ಆ್ಯಪ್‌ಗಳನ್ನು ನಿಷೇಧಿಸುವುದು ಸೇರಿದಂತೆ ಅನೇಕ ಕ್ರಾಂತಿಕಾರಿ ಹೆಜ್ಜೆಯನ್ನ ನೀವು ಇಟ್ಟಿದ್ದೀರಿ. ಅನೇಕ ಕುಟುಂಬಗಳು ಮತ್ತು ಯುವಕರು ಈ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗುವುದನ್ನು ನಾನು ನೋಡಿದ್ದೇನೆ ಮತ್ತು ಈ ಆನ್‌ಲೈನ್ ಆಟಗಳಿಗೆ ವ್ಯಸನದ ನಂತರದ ಪರಿಣಾಮಗಳಿಂದ ಕುಟುಂಬಗಳು ಬೀದಿಗೆ ಬಂದಿವೆ.
ಈ ಗೇಮ್‌ಗಳ ಮಾಲೀಕರು ಮಾತ್ರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ, ಇದರಿಂದ ಬಡಜನರು ಬಲಿಯಾಗುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸಿದಲ್ಲಿ ಧೈರ್ಯ ಪ್ರದರ್ಶಿಸಿದ್ದೀರಿ. ಈ ಬಗ್ಗೆ ನೀವು ವೈಯಕ್ತಿಕ ಗಮನಹರಿಸಿ ದೇಶಾದ್ಯಂತ ಹೊಸ ಸಾಮಾಜಿಕ ಪಿಡುಗು ಎಂದು ಸಾಬೀತಾಗಿರುವ ಇಂತಹ ಆ್ಯಪ್ಗಳ ಮಾಲೀಕರು/ಸಂಸ್ಥಾಪಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಈ ಮೂಲಕ ಮನವಿ ಮಾಡುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪತ್ರದ ಮೂಲಕ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.