ಹೊಸದಿಗಂತ ವರದಿ ಬನವಾಸಿ:
ಕನ್ನಡ ನಾಡಿನ ಮೊದಲ ರಾಜಧಾನಿ ಬನವಾಸಿಯ ಹಿರಿಮೆ ಸಾರುವ ಕದಂಬೋತ್ಸವದ ಹಿನ್ನೆಲೆಯಲ್ಲಿ ಕದಂಬ ಜ್ಯೋತಿಗೆ ಭಾನುವಾರ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗುಡ್ನಾಪುರದಲ್ಲಿ ಭಾನುವಾರದಿಂದ ಆರಂಭಗೊಂಡಿವೆ. ಕದಂಬ ಜ್ಯೋತಿ ಸಂಚಾರಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ ನೀಡಿ ಮಾತನಾಡುತ್ತ, ಗುಡ್ನಾಪುರದ ರಾಣಿ ಅಂತಪುರದಲ್ಲಿ ಕಳೆದ 5 ವರ್ಷದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕದಂಬ ಜ್ಯೋತಿ ಸಂಚಾರ ಆರಂಭ ಮಾಡಲಾಯಿತು. ಪ್ರತಿವರ್ಷದಂತೆ ಈ ವರ್ಷವು ಕದಂಬ ಜ್ಯೋತಿಗೆ ಚಾಲನೆ ನೀಡಲಾಗಿದೆ. ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸಂಚರಿಸಿ ಫೆ.5ರಂದು ರಾಜ್ಯದ ಮುಖ್ಯ ಮಂತ್ರಿಗಳು ಇದೇ ಜ್ಯೋತಿಯಿಂದ ಕದಂಬೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ರಾಜ್ಯದ ಹೆಮ್ಮೆಯ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು 3ನೇ ಬಾರಿಗೆ ಉದ್ಘಾಟಿಸುವರು. 2 ದಿನ ವಿವಿಧ ಕ್ರೀಡಾಕೂಟಗಳು, ನಾಡಿನ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕ್ಷೇತ್ರದ ಶಾಸಕನಾಗಿ ಎಲ್ಲರನ್ನೂ ಸ್ವಾಗತಿಸುತ್ತೇನೆ ಎಂದರು.
ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, ಬನವಾಸಿ ಕನ್ನಡದ ಪ್ರಥಮ ರಾಜಧಾನಿ ಎನ್ನುವಾಗ ಮೈ ರೋಮಾಂಚನಗೊಳ್ಳುತ್ತದೆ. ಈ ನೆಲದಲ್ಲಿ ಜೀವಿಸುತ್ತಿರುವ ನಾವೆಲ್ಲರೂ ಧನ್ಯರು. ಕನ್ನಡ ನಾಡಿನ ಹಿರಿಮೆಯನ್ನು ಜಾಸ್ತಿಗೊಳಿಸುವ ಕಾರ್ಯಕ್ರಮ ಇದಾಗಿದೆ. ಸ್ಥಳೀಯರ ಪಾಲ್ಗೊಳ್ಳುವಿಕೆ ಕದಂಬೋತ್ಸವಕ್ಕೆ ಇನ್ನಷ್ಟು ಬಲ ನೀಡಲಿದೆ. ಇತಿಹಾಸವಿಲ್ಲದೆ ನಾವೆಲ್ಲರೂ ಬೆಳೆಯಲು ಸಾಧ್ಯವಿಲ್ಲ. ನಮ್ಮ ಹಿರಿಯರಿಂದ ನಾಡಿನ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.
ಶಿರಸಿ ಸಹಾಯಕ ಆಯುಕ್ತೆ ಅಪರ್ಣ ರಮೇಶ, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್ ನಾಯ್ಕ್, ಗ್ರಾಪಂ ಸದಸ್ಯ ರಘು ನಾಯ್ಕ್ ಮಾತನಾಡಿದರು.
ಶಿರಸಿ ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾ ಪಂ ಇಒ ಸತೀಶ್ ಹೆಗಡೆ, ನಿರ್ಮಿತಿ ಅಭಿಯಂತರ ಕುಮಾರ್, ಗುಡ್ನಾಪುರ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಎಸ್. ನಾಯ್ಕ್, ಉಪಾಧ್ಯಕ್ಷ ಜಿ.ಎಮ್. ಪ್ರಕಾಶ್, ಅಂಡಗಿ ಗ್ರಾಪಂ ಅಧ್ಯಕ್ಷ ಸುದರ್ಶನ ನಾಯ್ಕ್, ರವಿ ಕೆ.ನಾಯ್ಕ್, ಮಂಜುನಾಥ, ಗುಡ್ನಾಪೂರ ಗ್ರಾಪಂ ಸದಸ್ಯರು, ಅಧಿಕಾರಿ ವರ್ಗದವರು, ಸಾರ್ವಜನಿಕರು, ಇದ್ದರು.
ಇದಕ್ಕೂ ಮುನ್ನ ಶ್ರೀ ಬಂಗಾರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಣಿ ಅಂತಪುರದವರೆಗೆ ಕದಂಬ ಜ್ಯೋತಿಯ ಮೆರವಣಿಗೆ, ಪೂರ್ಣಕುಂಭ ಸ್ವಾಗತ ನಡೆಯಿತು.