ಹತ್ತು ದಿನ, 12 ರಾಜ್ಯ, 29 ಕಾರ್ಯಕ್ರಮ: ಮೋಡಿ ಮಾಡಲಿದ್ದಾರೆ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಮುಂದಿನ ಹತ್ತು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 12  ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ 29 ಕಾರ್ಯಕ್ರಮಗಳಲ್ಲಿ ದಣಿವರಿಯದಂತೆ ಪಾಲ್ಗೊಳ್ಳಲಿದ್ದಾರೆ.
ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದೆಹಲಿಗೆ ಭೇಟಿ ನೀಡಲಿರುವ ಅವರು, ಈ ಭಾಗದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಚಾಲನೆ ನೆರವೇರಿಸಲಿದ್ದಾರೆ.
ಪ್ರಧಾನಿಯವರ ಪ್ರವಾಸದ ವೇಳಾಪಟ್ಟಿಯನ್ನು ಪ್ರಧಾನಮಂತ್ರಿಗಳ ಕಚೇರಿ ಹಂಚಿಕೊಂಡಿದ್ದು, ಅದು ಹೀಗಿದೆ…

ಮಾರ್ಚ್ 4: ತೆಲಂಗಾಣ, ತಮಿಳುನಾಡು
ಅದಿಲಾಬಾದ್‌ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಬಳಿಕ ತಮಿಳುನಾಡಿನ ಕಲ್ಪಾಕ್ಕಂಗೆ ತೆರಳಲಿರುವ ಅವರು, ಅಲ್ಲಿ ಅವರು ಭಾರತೀಯ ನಭಿಕಿಯಾ ವಿದ್ಯುತ್ ನಿಗಮ ಲಿಮಿಟೆಡ್‌ಗೆ ಭೇಟಿ ನೀಡಿ ಚೆನ್ನೈನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಬಳಿಕ ಹೈದರಾಬಾದ್‌ಗೆ ತೆರಳಲಿದ್ದಾರೆ.

ಮಾರ್ಚ್ 5: ಹೈದರಾಬಾದ್, ಒಡಿಶಾ
ತೆಲಂಗಾಣದ ಸಂಗಾರೆಡ್ಡಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅಂದು ಭಾಗವಹಿಸಲಿರುವ ಮೋದಿ, ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಒಡಿಶಾಗೆ ಪ್ರಯಾಣಿಸಿ, ಚಂಡಿಖೋಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.

ಮಾರ್ಚ್ 6: ಪಶ್ಚಿಮ ಬಂಗಾಳ, ಬಿಹಾರ
ಪಶ್ಚಿಮ ಬಂಗಾಳದಲ್ಲಿ15,400 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ, ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಲಿದ್ದಾರೆ. ಬಳಿಕ ಬಿಹಾರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು 12,800 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮ ಲೋಕಾರ್ಪಣೆಗೊಳಿಸಲಿದ್ದಾರೆ.

ಮಾರ್ಚ್ 7: ಜಮ್ಮು ಮತ್ತು ಕಾಶ್ಮೀರ
2019 ರಲ್ಲಿ 370 ನೇ ವಿಧಿ ರದ್ದು ನಂತರ ಕಾಶ್ಮೀರಕ್ಕೆ ಪ್ರಧಾನಿ ಮೋದಿ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ್‍ಯಾಲಿ ನಡೆಸಲಿದ್ದಾರೆ. ಅಲ್ಲಿಂದ ನವದೆಹಲಿಗೆ ವಾಪಸಾಗಲಿದ್ದಾರೆ.

ಮಾರ್ಚ್ 8: ದಿಲ್ಲಿ, ಅಸ್ಸಾಂ
ದಿಲ್ಲಿಯಲ್ಲಿ ನಡೆಯುವ ಮೊಟ್ಟಮೊದಲ ರಾಷ್ಟ್ರೀಯ ಸೃಷ್ಟಿಕರ್ತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸುವರು. ಸಂಜೆ ಅಸ್ಸಾಂಗೆ ತೆರಳಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 9: ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ
ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿರುವ ಮೋದಿ, ಪಶ್ಚಿಮ ಕಮೆಂಗ್‌ನಲ್ಲಿನ ಸೆಲಾ ಸುರಂಗವನ್ನು ಉದ್ಘಾಟಿಸಲಿದ್ದಾರೆ. ಬಳಿಕ ರಾಜಧಾನಿ ಇಟಾನಗರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ ಪಶ್ಚಿಮ ಬಂಗಾಳಕ್ಕೆ ವಾಪಸ್ ಆಗಲಿದ್ದು, ಸಿಲಿಗುರಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ, ನಂತರ ಸಾರ್ವಜನಿಕ ಭಾಷಣ ನಡೆಸಲಿದ್ದಾರೆ.

ಮಾರ್ಚ್ 10: ಉತ್ತರಪ್ರದೇಶ
ಅಂದು ಮೋದಿ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು, ಸಮಾಜವಾದಿ ಪಕ್ಷದ ಭದ್ರಕೋಟೆಯಾದ ಅಜಂಗಢದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 11: ದಿಲ್ಲಿ
ದಿಲ್ಲಿಯಲ್ಲಿ ನಡೆಯುವ ’ನಮೋ ಡ್ರೋನ್ ದೀದಿ’ ಮತ್ತು ’ಲಖಪತಿ ದೀದಿ’ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಸಂಜೆ ಡಿಆರ್‌ಡಿಒ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್ 12: ಗುಜರಾತ್, ರಾಜಸ್ಥಾನ
ಗುಜರಾತ್‌ನ ಸಬರಮತಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಬಳಿಕ ರಾಜಸ್ಥಾನಕ್ಕೆ ತೆರಳಿ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್‌ಗೆ ಭೇಟಿ ನೀಡಲಿದ್ದಾರೆ.

ಮಾರ್ಚ್ 13: ವೀಡಿಯೊ ಕಾನ್ಫರೆನ್ಸಿಂಗ್
ತಮ್ಮ ಹತ್ತನೇ ದಿನದ ಪ್ರವಾಸದಲ್ಲಿ ಪ್ರಧಾನಿ ಮೋದಿ, ಗುಜರಾತ್, ಅಸ್ಸಾಂನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!