ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಅದ್ಧೂರಿ ಕ್ರಿಸ್‌ಮಸ್ ಆಚರಣೆ ನಡೆಯುತ್ತಿದೆ. ಈ ಮಧ್ಯೆ ಆಮ್ ಆದ್ಮಿ ಪಕ್ಷವು (ಎಎಪಿ) ಅರವಿಂದ್ ಕೇಜ್ರಿವಾಲ್ ಅವರನ್ನು ಸಾಂತಾಕ್ಲಾಸ್ ಅವತಾರದಲ್ಲಿ ತೋರಿಸಲು ಕೃತಕ ಬುದ್ಧಿಮತ್ತೆಯನ್ನು(AI) ಬಳಸಿದೆ.
ದೆಹಲಿಯ ಸಾಂತಾ ವರ್ಷಪೂರ್ತಿ ಉಡುಗೊರೆಗಳನ್ನು ನೀಡುತ್ತಾರೆ ಎಂದು ಬರೆದು AAP ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. 36 ಸೆಕೆಂಡ್‌ಗಳಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
36 ಸೆಕೆಂಡ್‌ಗಳ ವಿಡಿಯೊದಲ್ಲಿ ಕೇಜ್ರಿವಾಲ್ ಸಾಂತಾ ವೇಷವನ್ನು ಧರಿಸಿದ್ದು, ಇದರಲ್ಲಿ ಹಾಡೊಂದು ಪ್ಲೇ ಆಗುತ್ತಿದೆ. “ಜಾಲಿ ಓಲ್ಡ್ ಕೇಜ್ರಿವಾಲ್” ಎಂಬ ಹಾಡನ್ನು ಕೇಳಬಹುದು . ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಮಹಿಳೆಯೊಬ್ಬರಿಗೆ 2,100 ರೂ. ಎಂದು ಬರೆದಿರುವ ಗಿಫ್ಟ್ ಬಾಕ್ಸ್ ಒಂದನ್ನು ನೀಡುತ್ತಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗೆ ಮುಂಚಿತವಾಗಿ ಮಹಿಳಾ ಸಮ್ಮಾನ್ ಯೋಜನೆಯನ್ನು AI ಮೂಲಕ ಎಎಪಿ ಘೋಷಿಸಿದೆ.
ವಯಸ್ಸಾದ ನಾಗರಿಕರಿಗಾಗಿ ಎಎಪಿ ಸ್ಕೀಮ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಕುರಿತಾಗಿಯೂ ಹಾಡಿನಲ್ಲಿ ಉಲ್ಲೇಖಿಸಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆಯಾದ “ಸಂಜೀವಿನಿ ಯೋಜನೆ” ಎಂಬ ಹೆಸರಿನ ಬಾಕ್ಸ್ ಒಂದನ್ನು ಕೇಜ್ರಿವಾಲ್ ಹಿಡಿದಿರುವುದನ್ನು ವಿಡಿಯೊ ತೋರಿಸಿದೆ.
ಹೋ… ಹೋ… ಹೋ.. ಸಾಂತಾ ಕೇಜ್ರಿವಾಲ್ ಬಂದಿದ್ದಾರೆ, ದೂರದ ಮತ್ತು ಹತ್ತಿರದ ಎಲ್ಲರಿಗೂ ಸಂತೋಷವನ್ನು ನೀಡುತ್ತಾರೆ. ಹಗಲು ರಾತ್ರಿ ವಿದ್ಯುತ್ ಉಚಿತ, ಸಾಂತಾ ಕೇಜ್ರಿವಾಲ್ ಅವರ ಉಡುಗೊರೆಗಳು ನೆಮ್ಮದಿ ನೀಡಲಿವೆ” ಎಂದು ಹಾಡು ಮುಂದುವರಿಯುತ್ತದೆ. ಇದೀಗ ಕೇಜ್ರಿವಾಲ್ ಸಾಂತಾ ವೇಷದಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.