ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಮೇಲಧಿಕಾರಿ ಜೊತೆ ಇರಲು ನಿರಾಕರಿಸಿದ 2ನೇ ಪತ್ನಿಗೆ ವ್ಯಕ್ತಿಯೋರ್ವ ತಲಾಖ್ ನೀಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ನಡೆದಿದೆ.
ಈ ವ್ಯಕ್ತಿ ತನ್ನ 2 ನೇ ಪತ್ನಿಗೆ ಆತನ ಮೇಲಧಿಕಾರಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಲು ಪೀಡಿಸುತ್ತಿದ್ದದ್ದು , ಮಾತ್ರವಲ್ಲದೇ ಮೊದಲ ಪತ್ನಿಗೆ ತಿಂಗಳಿಗೆ 15 ಲಕ್ಷ ನೀಡುವಂತೆ ಒತ್ತಾಯಿಸಿ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಸೊಹೈಲ್ ಶೇಖ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಎಂದು ತಿಳಿದುಬಂದಿದೆ.
ಮಹಿಳೆ ಮತ್ತು ಸೊಹೈಲ್ ಜನವರಿ 2024 ರಲ್ಲಿ ವಿವಾಹವಾಗಿದ್ದರು. ಅವರ ಮದುವೆಯಾದ ಕೆಲವೇ ತಿಂಗಳುಗಳಲ್ಲಿ, ಸೊಹೈಲ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಬಯಸುತ್ತಿದ್ದು, ಅದಕ್ಕಾಗಿ ತನಗೆ ಹಣದ ಅವಶ್ಯಕತೆಯಿದೆ ಎಂದು 2 ನೇ ಪತ್ನಿ ಬಳಿ ಹೇಳಿಕೊಂಡಿದ್ದ.ಇದಕ್ಕಾಗಿಯೇ ತಿಂಗಳಿಗೆ 15 ಲಕ್ಷ ನೀಡುವಂತೆ ಆಕೆಯ ಪೋಷಕರ ಬಳಿ ಕೇಳಲು 2 ನೇ ಪತ್ನಿಗೆ ಒತ್ತಡ ಹೇರುತ್ತಿದ್ದ. ಆದರೆ ಇದಕ್ಕೆ ಆಕೆ ಒಪ್ಪದೇ ಇದ್ದಾಗ, ಪಾರ್ಟಿಯೊಂದರಲ್ಲಿ ತನ್ನ ಬಾಸ್ ಜೊತೆ ಸೆಕ್ಸ್ ಮಾಡಲು ಪತ್ನಿಯನ್ನು ಪೀಡಿಸಿದ್ದ ಎಂದು ತಿಳಿದುಬಂದಿದೆ.
ಪತ್ನಿ ಇದಕ್ಕೂ ನಿರಾಕರಿಸಿದಾಗ ಆತ ಆಕೆಯನ್ನು ಥಳಿಸಿ ತಲಾಖ್ ನೀಡಿದ್ದ ಈ ಬಳಿಕ ಮನೆ ಬಿಟ್ಟು ತೆರಳುವಂತೆ ಹೇಳಿದ್ದ ಎಂದು ತಿಳಿದುಬಂದಿದೆ. ನಂತರ ಮಹಿಳೆ ಡಿಸೆಂಬರ್ 19 ರಂದು ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಆತನ ವಿರುದ್ಧ ದೂರು ಸಲ್ಲಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಕಲ್ಯಾಣ್ ಪೊಲೀಸ್ ಅಧೀಕ್ಷಕರು, ಸಂಭಾಜಿ ನಗರ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ನಂತರ ಪ್ರಕರಣವನ್ನು ಬಜಾರ್ ಪೇಠ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತಿಯಿಂದ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದು, ಪತಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ಬೇರೊಬ್ಬ ಪುರುಷನೊಂದಿಗೆ ಮಲಗುವಂತೆ ಒತ್ತಾಯಿಸಿದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.