ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ಕೆಮ್ಮಣ್ಣುಗುಂಡಿ ಬಳಿಯ ಹೆಬ್ಬೆ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಛತ್ತೀಸಗಡ ಮೂಲದ ಅಮಿತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ತಮಿಳುನಾಡಿನ ಗೆಳೆಯ ಸಲಾಮ್ ಖಾನ್ ಜೊತೆಗೆ ಹೋಗಿದ್ದರು.
ರಜೆ ಇದ್ದ ಕಾರಣ ಇವರಿಬ್ಬರು ಪ್ರವಾಸ ಕೈಗೊಂಡಿದ್ದರು. 120 ಅಡಿ ಇಳಿಜಾರಿನಲ್ಲಿ ನೀರು ಹರಿಯುವ ಹೆಬ್ಬೆ ಜಲಪಾತ ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ಜಲಪಾತದಲ್ಲಿನ ಎಚ್ಚರಿಕೆ ಫಲಕವನ್ನು ನಿರ್ಲಕ್ಷಿಸಿ ಇಬ್ಬರೂ ಈಜಲು ಹೋದಾಗ ಈ ದುರಂತ ಸಂಭವಿಸಿದೆ.
ಆಳವಾದ ನೀರಿನಲ್ಲಿ ಅಮಿತ್ ಸಿಕ್ಕಿಬಿದ್ದು ನೀರಿನಲ್ಲಿ ಮುಳುಗಿದ್ದಾರೆ, ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರು ಸಲಾಂ ಖಾನ್ ನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.