ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲೆಡೆ ದುರ್ಗಾ ಪೂಜೆ ಸಂಭ್ರಮ ಸಡಗರದಿಂದ ನಡೆಯುತ್ತಿದೆ.ಅತ್ತ ಬಾಂಗ್ಲಾದೇಶದಲ್ಲೂ ದುರ್ಗಾಪೂಜೆ ಪ್ರತಿವರ್ಷ ಸಂಭ್ರಮ ಸಡಗರದಿಂದ ನಡೆಯುತ್ತಿತ್ತು. ಆದರೆ ಕೆಲ ತಿಂಗಳ ಹಿಂದೆ ನಡೆದ ಸರ್ಕಾರದ ವಿರುದ್ಧದ ಮತೀಯವಾದಿ ದಂಗೆಯಿಂದ ಈಗ ಅಲ್ಲಿನ ಹಿಂದು ಸಮುದಾಯದ ದುರ್ಗಾ ಪೂಜೆಯ ಮೇಲೂ ಅದರ ಕರಿ ನೆರಳು ಬಿದ್ದಿದೆ.
ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಅಧಿಕಾರಕ್ಕೆ ಬಂದಿದೆ .
ಈ ಬಾಂಗ್ಲಾದೇಶದ ಹಂಗಾಮಿ ಸರ್ಕಾರವೀಗ ಅಲ್ಲಿರುವ ಹಿಂದು ಸಮುದಾಯಕ್ಕೆ ಅಜಾನ್ ಕೂಗುವ ವೇಳೆ ಹಾಗೂ ನಮಾಝ್ ಮಾಡುವ ವೇಳೆ ದುರ್ಗಾಪೂಜೆಯ ಚಟುವಟಿಕೆಗಳನ್ನು ಬಂದ್ ಮಾಡುವಂತೆ ಸೂಚಿಸಿದೆ.
ನಮಾಜ್‌ಗೆ ಐದು ನಿಮಿಷ ಮೊದಲು ಮತ್ತು ನಮಾಜ್ ಸಮಯದಲ್ಲಿ ಯಾವುದೇ ಸಂಗೀತ ವಾದ್ಯಗಳನ್ನು ನುಡಿಸದಿರುವಂತೆ ಸೂಚನೆ ನೀಡಿದೆ.
ನಮಾಜ್ ಸಲ್ಲಿಸುವ ವೇಳೆ ಇಂತಹ ಸಂಗೀತ ವಾದ್ಯಗಳ ನುಡಿಸುವುದನ್ನು ನಿಲ್ಲಿಸಬೇಕು ಹಾಗೂ ಅಜಾನ್‌ಗೆ ಐದು ನಿಮಿಷವಿರುವಾಗ ಈ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಬೇಕು ಎಂದು ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಎಂಡಿ ಜಹಾಂಗೀರ್ ಅಲಂ ಚೌಧರಿ ಹೇಳಿದ್ದಾರೆ.
ಅಜಾನ್ ಸಮಯದಲ್ಲಿ ಈ ಸಂಗೀತ ಉಪಕರಣಗಳು ಹಾಗೂ ಧ್ವನಿವರ್ಧಕಗಳ ಸ್ವಿಚ್ ಆಫ್ ಮಾಡುವಂತೆ ದುರ್ಗಾ ಪೂಜಾ ಸಮಿತಿಗಳಿಗೆ ತಿಳಿಸಲಾಗಿದೆ ಎಂದು ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರರು ಹೇಳಿದ್ದಾರೆ. ಇದಕ್ಕೆ ಸಮಿತಿಗಳು ಕೂಡ ಒಪ್ಪಿಗೆ ಸೂಚಿಸಿವೆ ಎಂದು ಅವರು ಹೇಳಿದ್ದಾರೆ.
ಈ ವರ್ಷ ಬಾಂಗ್ಲಾದೇಶದೆಲ್ಲೆಡೆ ಒಟ್ಟು 32,666 ದುರ್ಗಾ ಪೂಜಾ ಪೆಂಡಾಲ್‌ಗಳನ್ನು ಸ್ಥಾಪಿಸಲಾಗುತ್ತದೆ. ಢಾಕಾದ ದಕ್ಷಿಣ ನಗರದಲ್ಲಿ 157 ಹಾಗೂ ಢಾಕಾ ನಗರ ವ್ಯಾಪ್ತಿಯಲ್ಲಿ 88 ಮಂಟಪಗಳನ್ನು ನಿರ್ಮಿಸಲಾಗುತ್ತದೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ 33,431 ಪೂಜಾ ಮಂಟಪಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈ ವರ್ಷ ಅದಕ್ಕಿಂತ ಹೆಚ್ಚು ಇರಲಿದೆ ಎಂದು ಗೃಹ ವ್ಯವಹಾರಗಳ ಸಲಹೆಗಾರರು ಹೇಳಿದ್ದಾರೆ. ಈ ಪೂಜಾ ಮಂಟಪಗಳಿಗೆ 24 ಗಂಟೆ ಹೇಗೆ ಭದ್ರತೆ ಒದಗಿಸುವುದು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ.