May 23, 2026
Saturday, May 23, 2026
spot_img

ಬೆಳಗಾವಿಯಲ್ಲಿ ‘ಬಾಂಗ್ಲಾ’ ಹೈ ಅಲರ್ಟ್‌ ಕಾರ್ಯಾಚರಣೆ: ವಲಸಿಗರ ಶಂಕೆಯಲ್ಲಿ ಕಾರ್ಮಿಕರ ತಪಾಸಣೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರವೇಶಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಹೈ ಅಲರ್ಟ್‌ ಘೋಷಿಸಿ ಭಾರಿ ಕಾರ್ಯಾಚರಣೆ ನಡೆಸಿದರು.

ಬೆಳಗಾವಿ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕೆಲವರ ತಪಾಸಣೆಯಾಗಿದ್ದು, ಮೂರು ಬಸ್‌ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬೆಳಗಾವಿ ನಗರಕ್ಕೆ ಬಂದಿದ್ದಾರೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ನೇತೃತ್ವದ ತಂಡವು ಅನುಮಾನ ವ್ಯಕ್ತಪಡಿಸಿತ್ತು.

ಡಿಸಿಪಿ ನೇತೃತ್ವದಲ್ಲಿ ತಪಾಸಣೆ

ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆದ ಡಿಸಿಪಿ ನಾರಾಯಣ ಭರಮನಿ ನೇತೃತ್ವದ ಪೊಲೀಸ್ ತಂಡವು ತಕ್ಷಣವೇ ಎಲ್ಲರನ್ನೂ ಠಾಣೆಗೆ ಕರೆತಂದು ತನಿಖೆ ಆರಂಭಿಸಿತು.

ಕಾರ್ಮಿಕರ ಸ್ಪಷ್ಟನೆ

ವಿಚಾರಣೆ ವೇಳೆ ವಶಕ್ಕೆ ಒಳಗಾದವರು, “ನಾವು ಬಾಂಗ್ಲಾದೇಶದವರಲ್ಲ, ಪಶ್ಚಿಮ ಬಂಗಾಳ ಮೂಲದವರು. ಶಹಾಪುರದಲ್ಲಿ ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತದಾನ ಇದ್ದಿದ್ದರಿಂದ ಊರಿಗೆ ಹೋಗಿದ್ದೆವು, ಈಗ ವಾಪಸ್ ಕೆಲಸಕ್ಕೆ ಬಂದಿದ್ದೇವೆ” ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:

ದಾಖಲೆಗಳ ಪರಿಶೀಲನೆ ಮುಂದುವರಿಕೆ

ಡಿಸಿಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಮಿಕರ ಮೊಬೈಲ್ ಸಂಖ್ಯೆಗಳು, ಆಧಾರ್ ಕಾರ್ಡ್‌ಗಳು ಮತ್ತು ವೋಟರ್ ಐಡಿಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲವೂ ಅಸಲಿ ದಾಖಲೆಗಳೆಂದು ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ಸುರಕ್ಷತೆಗಾಗಿ ಎಲ್ಲರ ಹೆಬ್ಬೆರಳ ಗುರುತುಗಳನ್ನು ಪಡೆದುಕೊಳ್ಳಲಾಗಿದೆ.

ಯಾವುದೇ ಅಧಿಕೃತ ತಾಂತ್ರಿಕ ದೋಷ ಕಂಡು ಬರದ ಕಾರಣ, ವಿಚಾರಣೆಯ ನಂತರ ಆ ಎಲ್ಲಾ ಕಾರ್ಮಿಕರನ್ನು ಅವರವರ ನಿವಾಸ ಹಾಗೂ ಕೆಲಸದ ಸ್ಥಳಗಳಿಗೆ ವಾಪಸ್ ಕಳುಹಿಸಿಕೊಡಲಾಗಿದೆ. ಆದರೆ, ದಾಖಲೆಗಳು ನಕಲಿಯೇ ಎಂಬ ಬಗ್ಗೆ ಆಂತರಿಕ ಪರಿಶೀಲನೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !