April 13, 2026
Monday, April 13, 2026
spot_img

ಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾದೇಶ: ಹೆಚ್ಚುವರಿ ಡೀಸೆಲ್ ನೀಡಲು ಮನವಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಸಂಘರ್ಷದಿಂದ ಇಂಧನ ಬಿಕ್ಕಟ್ಟು ಹೆಚ್ಚುತ್ತಿದ್ದು, ಈ ನಡುವೆ ಬಾಂಗ್ಲಾದೇಶವು ಭಾರತದಿಂದ ಹೆಚ್ಚುವರಿ ಡೀಸೆಲ್ ಪೂರೈಕೆಗೆ ವಿನಂತಿಸಿದೆ.

ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ತೈಲ ಪೂರೈಕೆಯ ಅಡೆತಡೆಗಳಿಂದಾಗಿ ಬಾಂಗ್ಲಾದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿಗೆ ಅನ್ವಯಿಸುವಂತೆ ಒಟ್ಟು 50,000 ಮೆಟ್ರಿಕ್ ಟನ್ ಹೆಚ್ಚುವರಿ ಡೀಸೆಲ್ ಒದಗಿಸುವಂತೆ ಬಾಂಗ್ಲಾದೇಶವು ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.

ಬಾಂಗ್ಲಾದೇಶದ ಹಣಕಾಸು ಸಚಿವ ಅಮೀರ್ ಖಾಸ್ರು ಮಹಮೂದ್ ಚೌಧರಿ ಮತ್ತು ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರ ಬಳಿ ಈ ಮನವಿ ಮಾಡಿದೆ.

ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಡೀಸೆಲ್ ಪೂರೈಕೆಯ ಒಪ್ಪಂದವಿದೆ. ಇದರ ಭಾಗವಾಗಿ ಅಸ್ಸಾಂನ ನುಮಾಲಿಗಢ ಸಂಸ್ಕರಣಾಗಾರದಿಂದ ಪೈಪ್‌ಲೈನ್ ಮೂಲಕ 5,000 ಮೆಟ್ರಿಕ್ ಟನ್ ಡೀಸೆಲ್ ಅನ್ನು ಬಾಂಗ್ಲಾದೇಶಕ್ಕೆ ರವಾನಿಸಲಾಗಿದೆ. ಉತ್ತರ ಬಾಂಗ್ಲಾದೇಶದ ದಿನಾಜ್‌ಪುರದ ಪರ್ಬತಿಪುರ ಡಿಪೋಗೆ ‘ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್‌ಲೈನ್’ ಮೂಲಕ ಈ ಇಂಧನ ತಲುಪುತ್ತಿದೆ.

ಒಪ್ಪಂದದ ಪ್ರಕಾರ, ಆರು ತಿಂಗಳ ಅವಧಿಯಲ್ಲಿ ಭಾರತವು ಒಟ್ಟು 90,000 ಟನ್ ಡೀಸೆಲ್ ಅನ್ನು ರಫ್ತು ಮಾಡಬೇಕಿದೆ. ಇದೀಗ ಇದನ್ನು ಮುಂದಿನ ಎರಡು ತಿಂಗಳಲ್ಲೇ ಪೂರೈಸಲು ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ ಆಶಿಸಿದೆ.

ತೈಲ ಅಭಾವದಿಂದಾಗಿ ಬಾಂಗ್ಲಾದೇಶ ಸರ್ಕಾರ ದೇಶಾದ್ಯಂತ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ವಿದ್ಯುತ್ ಮತ್ತು ತೈಲ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಸೋಮವಾರದಿಂದಲೇ ರಜೆ ಘೋಷಿಸಲಾಗಿದೆ. ಇನ್ನು ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ಮಾರಾಟದ ಮೇಲೆ ಮಿತಿ ಹೇರಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !