ಬಾಂಗ್ಲಾದೇಶ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ?

ಹೊಸದಿಗಂತ ಡಿಜಿಟಲ್ ಡೆಸ್ಕ್;

ಬಾಂಗ್ಲಾದೇಶದಾದ್ಯಂತ ಹಿಂಸಾಚಾರ ನಡೆಯುತ್ತಿದ್ದು, ಈ ಮಧ್ಯೆ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ ನೀಡುವಂತೆ ನ್ಯಾಯಾಧೀಶರ ನಿವಾಸಗಳಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಹೀಗಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ನಿಷ್ಠಾವಂತ ಎನಿಸಿಕೊಂಡಿರುವ ಒಬೈದುಲ್ ಹಸನ್‌ ಅವರನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಪ್ರತಿಭನಾಕಾರರು ಆಗಸ್ಟ್‌ 10ರ ಮಧ್ಯಾಹ್ನ 1 ಗಂಟೆಯೊಳಗೆ ರಾಜೀನಾಮೆಗೆ ನೀಡದಿದ್ದರೆ ನ್ಯಾಯಾಧೀಶರ ನಿವಾಸಗಳಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರವನ್ನು ಸಂಪರ್ಕಿಸದೆ ಒಬೈದುಲ್ ಹಸನ್ ಅವರು ನ್ಯಾಯಾಲಯದ ಸಭೆ ಕರೆಯಲು ಮುಂದಾದ ಹಿನ್ನಲೆಯಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಇಂದು ಬೆಳಿಗ್ಗೆ 10:30ರ ವೇಳೆಗೆ ವಿದ್ಯಾರ್ಥಿಗಳು ಮತ್ತು ವಕೀಲರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಹೊರಗೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಧ್ಯಂತರ ಸರ್ಕಾರದಲ್ಲಿ ಯುವ ಮತ್ತು ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಮಾತನಾಡಿ ಮುಖ್ಯ ನ್ಯಾಯಮೂರ್ತಿ ಹಸನ್ ಅವರ ಬೇಷರತ್ತಾದ ರಾಜೀನಾಮೆಗೆ ಆಗ್ರಹಿಸಿದರು ಮತ್ತು ವಿವಾದಾತ್ಮಕ ನ್ಯಾಯಾಲಯದ ಸಭೆಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

ವಿವಿಧ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆಸದೆ ಪೂರ್ಣ ನ್ಯಾಯಾಲಯದ ಸಭೆಯನ್ನು ಕರೆದಿದ್ದಾರೆ. ವಿದ್ಯಾರ್ಥಿಗಳು ಮತ್ತು ವಕೀಲರು ಈಗಾಗಲೇ ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ ಎಂದು ಈಮಹಮೂದ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

‘ನಾವು ಈಗಾಗಲೇ ಮುಖ್ಯ ನ್ಯಾಯಮೂರ್ತಿಯ ರಾಜೀನಾಮೆಗೆ ಕರೆ ನೀಡಿದ್ದೆವು. ಅವರು ವಿದ್ಯಾರ್ಥಿಗಳ ವಿರುದ್ಧ ನಿಲುವು ತೆಗೆದುಕೊಂಡು ಅವರನ್ನು ಪ್ರಚೋದಿಸಿದರೆ, ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!