ಹೊಸ ದಿಗಂತ ವರದಿ, ಹುಬ್ಬಳ್ಳಿ:
ಬಂಜಾರ ಸಮಾಜದ ಜನರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಈ ಸಮಾಜ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ನವನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಂಜಾರ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮಾಜ ಮೊಘಲರು ಹಾಗೂ ಬ್ರಿಟಿಷರ್ ಕಾಲದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಿದ ಇತಿಹಾಸವಿದೆ ಎಂದರು.
ಪ್ರಧಾನಿ ಮೋದಿಯವರು ವಿಶೇಷ ಆಸಕ್ತಿಯಿಂದ ಸ್ವಾಮಿತ್ವ ಯೋಜನೆ ಜಾರಿಗೆ ತಂದಿದ್ದಾರೆ. ಇದು ಬಂಜಾರ ಹಾಗೂ ಲಂಬಾಣಿ ಸಮಾಜದ ಅಭಿವೃದ್ಧಿಗೆ ಮುನ್ನಡಿಯಾಗಿದೆ. ಈ ಸಮಾಜದ ಅಭಿವೃದ್ಧಿಗೆ ಸ್ಟ್ಯಾಡಪ್ ಯೋಜನೆ ಜಾರಿಗೆ ತಂದಿದ್ದು, ಸಾಕಷ್ಟು ಜನರು ಇದರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಬಂಜಾರ ಸಮಾಜದ ಮುಖಂಡರಿಗೂ ಬಿಜೆಪಿ ಪಕ್ಷದಲ್ಲಿ ಮುಖ್ಯ ಸ್ಥಾನ ಮಾನ ನೀಡಲಾಗಿದೆ. ಸಮಾಜದ ಕೆಲವರು ಉತ್ತಮ ಸ್ಥಾನದಲ್ಲಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಾಗಬೇಕು ಎಂದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಾದದ್ಯಾಂತ ಬಂಜಾರ ಭವನಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಭವನ ಕೇಲವ ಕಟ್ಟಡವಾಗಿರಲ್ಲ. ಬಂಜಾರ ಸಮಾಜದ ಅಸ್ತಿತ್ವ ಹಾಗೂ ಅಸ್ಮಿತೆಯಾಗಿದೆ. ಬಂಜಾರ ಸಂಸ್ಕೃತಿ ಹಾಗೂ ಸಮಾಜದ ಅಭಿವೃದ್ಧಿ ವಿವಿಧ ಕಾರ್ಯ ಚಟುವಟಿಕೆ ತಾಣವಾಗಬೇಕು ಎಂದರು.
ಮೂರು ಸಾವಿರ ಕಂದಾಯ ಗ್ರಾಮ ಮಾಡುವ ಸರ್ಕಾರದ ಗುರಿಯಿದೆ. ಈಗಾಗಲೇ 50 ಸಾವಿರ ಹಕ್ಕು ಪತ್ರಗಳ ಮುದ್ರಣ ಮಾಡಲಾಗಿದ್ದು, ಸದ್ಯದಲೇ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ. ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಿಂದ ಇಷ್ಟು ಪ್ರಮಾಣದಲ್ಲಿ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದರು.
ಅಕ್ಟೋಬರ್ ೧೦ ದಿನಾಂಕ ನಿಗದಿ ಮಾಡಲಾಗಿದ್ದು, ಕಲಬುರಗಿ ಜಿಲ್ಲೆಯ 253 ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮ ಮಾಡವು ಗುರಿ ಹೊಂದಲಾಗಿದೆ. ಹಕ್ಕು ಪತ್ರ ಸಹ ವಿತರಿಸಲಾಗುತ್ತದೆ. ಕಲಬುರಗಿ ಯಶಸ್ಸು ಆದ ಬಳಿಕ ಮುಂದು ಬರುವ ಚುನಾವಣೆಯೊಳಗಾಗಿ ರಾಜ್ಯದ ಎಲ್ಲ ತಾಂಡಗಳ ಜನರಿಗೆ ಹಕ್ಕು ಪತ್ರ ನೀಡುವ ಗುರಿ ಹೊಂದಲಾಗಿದೆ ಎಂದರು.
ಬಂಜಾರ ಹಾಗೂ ಲಂಬಾಣಿ ಸಮಾಜಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈಗ ಕಾಲ ಬದಲಾಗಿದೆ ಈ ಸಮಾಜದವರು ಸಹ ಉನ್ನತ ಶಿಕ್ಷಣ, ಸರ್ಕಾರದ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸಮಾಜದ ಅಭಿವೃದ್ಧಿ ಮುನ್ನುಡಿಯಾಗಿದೆ ಎಂದರು.
ಇಂತಹ ಭವನಗಳ ಸಮಾಜದ ಅಭಿವೃದ್ಧಿಯ ತಾಣವಾಗಬೇಕು. ಮುಖಂಡರು ಸಮಾಜದ ಜನರ ಅಭಿವೃದ್ಧಿಗೆ ಬೇಕಾದ ಸಂಸ್ಕೃತಿ, ಕೌಶಲಗಳ ತರಬೇತಿಗೆ ಬಳಸಿಕೊಳ್ಳಬೇಕು. ಸಮಾಜದ ಜನರಲ್ಲಿ ನಾವೆಲ್ಲ ಒಂದು ಎಂಬ ಭಾವನೆ ಮೂಡಬೇಕು ಎಂದು ತಿಳಿಸಿದರು.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು ಚಂದ್ರನಾಯ್ಕ್, ಬಸವರಾಜ ಎನ್., ಹರಿಲಾಲ ಪವಾರ, ಪಾಂಡುರಂಗ ಪಮ್ಮಾರ, ಸುನೀತ ಮಾಳನಕರ್, ಮಲ್ಲಿಕಾರ್ಜುನ ಹೊರಕೇರಿ ಇದ್ದರು. ಸಮಾರಂಭ ಆರಂಭಕ್ಕೂ ಮುನ್ನ ಡೊಳ್ಳು ಕುಣಿತ, ಲಂಬಾಣಿ ನೃತ್ಯ ಮಾಡಿ ಸಂಭ್ರಮಿಸಿದರು.