ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ಬ್ಯಾಂಕಿಂಗ್ ಬೆಳವಣಿಗೆಯು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಆದರೆ ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಸಾಮಾನ್ಯರನ್ನು ವಂಚಿಸಿ ಹಣ ದೋಚುತ್ತಿರುವ ಪ್ರಕರಣಗಳೂ ದೇಶದೆಲ್ಲೆಡೆ ವರದಿಯಾಗುತ್ತಿದ್ದು ಈ ಕುರಿತು ಗ್ರಾಹಕರಿಗೆ ಎಚ್ಚರದಿಂದಿರುವಂತೆ ಭಾರತದ ಪ್ರಮುಖ ಬ್ಯಾಂಕುಗಳಾದ ಹೆಚ್‌ಡಿಎಫ್‌ಸಿ ಹಾಗು ಎಸ್‌ಬಿಐ ಸಲಹೆ ನೀಡಿವೆ.
HDFC ಮತ್ತು SBI ನಂತಹ ಪ್ರಮುಖ ಬ್ಯಾಂಕ್‌ಗಳ ಗ್ರಾಹಕರು ತಮ್ಮ ಹಣವನ್ನು ಕದಿಯಲು ಪ್ರಯತ್ನಿಸುತ್ತಿರುವ ಮೋಸದ ಸಂದೇಶಗಳ ಬಲೆಗೆ ಒಳಗಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ವಂಚನೆಗಳು ವರದಿಯಾಗುತ್ತಿದ್ದರೂ, ಇತ್ತೀಚೆಗೆ ಅವು ಹೆಚ್ಚಾಗಿವೆ. ಅಮಾಯಕರನ್ನು ವಂಚಿಸಲು ಮೋಸಗಾರರು ವಿಭಿನ್ನ ತಂತ್ರಗಳನ್ನು ಬಳಸುತ್ತಿದ್ದು ಈ ಬಾರಿ ಅವರು ಇನ್ನೊಂದು ಸಂಚು ರೂಪಿಸಿದ್ದಾರೆ. ಈ ವಂಚಕರು ಜನರಿಗೆ ತಮ್ಮ ಖಾತೆಯ ಮಾಹಿತಿ ಅಥವಾ ಪ್ಯಾನ್ ಕಾರ್ಡ್ ಮಾಹಿತಿಯನ್ನು ನವೀಕರಿಸುವಂತೆ ಬ್ಯಾಂಕ್ ಗಳ ಹೆಸರಿನಿಂದ ನಕಲಿ ಲಿಂಕ್‌ಗಳನ್ನು ಕಳುಹಿಸುವ ಮೂಲಕ ವಂಚನೆಯ ಜಾಲಕ್ಕೆ ಬೀಳಿಸಿ ಹಣ ದೋಚುತ್ತಿದ್ದಾರೆ.
ಗ್ರಾಹಕರು ತಮ್ಮ ಮಾಹಿತಿಯನ್ನು ಬದಲಾಯಿಸದಿದ್ದರೆ ಅಥವಾ ನವೀಕರಿಸದಿದ್ದರೆ ಗ್ರಾಹಕರ ಖಾತೆಯನ್ನು “ನಿರ್ಬಂಧಿಸಲಾಗುತ್ತದೆ” ಎಂದು ಈ ಸಂದೇಶಗಳಲ್ಲಿ ಉಲ್ಲೇಖಿಸಲಾಗುತ್ತದೆ. ಈ ಸಂದೇಶಗಳ ಗುರಿ ಗ್ರಾಹಕರು ಭಯಭೀತರಾಗುವಂತೆ ಮಾಡುವುದು. ಗಾಬರಿಗೊಳಗಾದ ವ್ಯಕ್ತಿಯು ತಕ್ಷಣವೇ ತಮ್ಮ ಮಾಹಿತಿಯನ್ನು ವಂಚಕರೊಂದಿಗೆ ಹಂಚಿಕೊಳ್ಳುತ್ತಾರೆ. ಒಂದೊಮ್ಮೆ ಗ್ರಾಹಕರು ಈ ಮಾಹಿತಿಯನ್ನು ಹಂಚಿಕೊಂಡರೆ ವಂಚಕರು ತ್ವರಿತವಾಗಿ ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಿ ಅವರ ಹಣವನ್ನು ತೆಗೆದುಕೊಳ್ಳುತ್ತಾರೆ.
ಈ ಕುರಿತು HDFC ಬ್ಯಾಂಕ್ ಟ್ವೀಟ್ ಮಾಡಿದ್ದು “ವಂಚಕರಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ! HDFC ಬ್ಯಾಂಕ್‌ನಿಂದ ಸಂದೇಶಗಳು ಅಧಿಕೃತ ID HDFCBK/HDFCBN ನಿಂದ ಬಂದಿವೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ ಮತ್ತು ಲಿಂಕ್‌ಗಳು http://hdfcbk.io ನೊಂದಿಗೆ ಪ್ರಾರಂಭವಾಗುತ್ತವೆ. PAN/KYC ನವೀಕರಣಗಳು ಅಥವಾ ಇತರ ಬ್ಯಾಂಕಿಂಗ್ ಮಾಹಿತಿಯನ್ನು ವಿನಂತಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸಬೇಡಿ..” ಎಂದು ಹೇಳಿದೆ.
ಈ ವಂಚಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೂ ಇದೇ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಗ್ರಾಹಕರನ್ನು ಎಚ್ಚರಿಸಲು, ಎಸ್‌ಬಿಐ ತನ್ನ ಟ್ವಿಟರ್ ಖಾತೆಯಲ್ಲಿ ವಂಚಕರಿಂದ ಕಳುಹಿಸಲ್ಪಟ್ಟ ಸಂದೇಶವನ್ನು ಹಂಚಿಕೊಂಡಿದೆ. ಆ ಸಂದೇಶ ಹೀಗಿದೆ “ಆತ್ಮೀಯ ಗ್ರಾಹಕರೇ, ನಿಮ್ಮ ಎಸ್‌ಬಿಐ ಯೋನೋ ಖಾತೆ ಇಂದು ಮುಚ್ಚಲ್ಪಟ್ಟಿದೆ ಈಗಲೇ ಸಂಪರ್ಕಿಸಿ ಮತ್ತು ಈ ಕೆಳಗಿನ ಲಿಂಕ್‌ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆಯನ್ನು ನವೀಕರಿಸಿ.” ಇಂಥಹ ಸಂದೇಶಗಳು ನೇರವಾಗಿ ಬ್ಯಾಂಕ್‌ನಿಂದ ಬರುತ್ತಿವೆ ಎಂಬಂತೆ ಭಾಸವಾಗುತ್ತವೆ. ಕೆಲವೊಮ್ಮೆ ಖಾತೆದಾರರ ಹೆಸರನ್ನೂ ನಮೂದಿಸುವ ಮೂಲಕ ವಂಚಕರು ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರು ಯಾವುದೇ ಕಾರಣಕ್ಕೂ ಇಂಥಹ ಮೋಸದ ಜಾಲಕ್ಕೆ ಬೀಳಬೇಡಿ ದೂರವಾಣಿ ಸಂದೇಶದ ಮೂಲಕ ಬ್ಯಾಂಕುಗಳು ಯಾವುದೇ ದಾಖಲೆಯನ್ನು ಕೇಳುವುದಿಲ್ಲ ಎಂದು ಎಚ್ಚರಿಕೆ ಸಂದೇಶವನ್ನು ಎಸ್‌ಬಿಐ ನೀಡಿದೆ.