ನೋಟು ನಿಷೇಧದ ಅಧಿಸೂಚನೆ ಕಾನೂನುಬಾಹಿರ: ನ್ಯಾ.ನಾಗರತ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

2016ರ ನವೆಂಬರ್ 8ರಂದು ಕೇಂದ್ರ ಸರಕಾರ ತೆಗೆದುಕೊಂಡ ನೋಟು ಅಮಾನ್ಯೀಕರಣ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಆದ್ರೆ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೈಕಿ ನಾಲ್ವರು ಕೇಂದ್ರ ನಿರ್ಧಾರ ಸರಿ ಎಂದು ಹೇಳಿದರೆ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ. ಇದೊಂದು ಕಾನೂನು ಬಾಹಿರ ಕ್ರಮ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ೧೦೦೦ ರೂ . ಮತ್ತು ೫೦೦ ರೂ . ಮುಖಬೆಲೆಯ ನೋಟು ಅಮಾನ್ಯೀಕರಣ ನಿರ್ಧಾರ ಸರಿ ಎಂದು ಐತಿಹಾಸಿಕ ತೀರ್ಪು ನೀಡಿದೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಆದರೆ ನ್ಯಾಯಾಧೀಶರಲ್ಲಿ ಬಿ.ವಿ.ನಾಗರತ್ನ ಅವರು, ನೋಟು ನಿಷೇಧದ ಕಾನೂನಾತ್ಮಕ ಅಂಶಗಳು ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಸಂಸತ್ತು ಇಲ್ಲದೇ ಪ್ರಜಾಪ್ರಭುತ್ವ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಸಂಸತ್ತನ್ನು ದೂರವಿಟ್ಟಿದ್ದು ಸರಿಯಲ್ಲ.

ನೋಟು ಅಮಾನ್ಯೀಕರಣದ ಬಗ್ಗೆ ವಿಶ್ವಾದ್ಯಂತದ ಇತಿಹಾಸವನ್ನು ಉಲ್ಲೇಖಿಸಿದ್ದೇನೆ. ಕೇಂದ್ರ ಸರ್ಕಾರವು ನೋಟು ನಿಷೇಧದ ಬಗ್ಗೆ ಆರ್‌ಬಿಐ(RBI) ಅಭಿಪ್ರಾಯವನ್ನು ಮಾತ್ರ ಕೇಳಿತ್ತು. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸಿಲ್ಲ. ಆರ್‌ಬಿಐ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, ಕೇಂದ್ರ ಸರ್ಕಾರವು ಬಯಸಿದಂತೆ 500 ಮತ್ತು 1000 ನೋಟುಗಳನ್ನು ಹಿಂಪಡೆಯಲು ಸರ್ಕಾರ ಶಿಫಾರಸು ಮಾಡಿದೆ ಎಂಬ ಪದಗಳು ಮತ್ತು ಪದಗುಚ್ಛಗಳ ಬಳಕೆಯನ್ನು ನಾನು ಗಮನಿಸಿದ್ದೇನೆ. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸದೇ ಇರುವುದು ಸರಿಯಲ್ಲ.

500 ಮತ್ತು 1000 ರೂ. ಎಲ್ಲಾ ಸರಣಿಯ ನೋಟುಗಳ ಅಮಾನ್ಯೀಕರಣದ ಸಂಪೂರ್ಣ ಕೆಲಸವನ್ನು 24 ಗಂಟೆಯಲ್ಲಿ ನಡೆಸಲಾಗಿದೆ. ಭಾರತದ ಆರ್ಥಿಕತೆ(Indian Economy) ಮತ್ತು ನಾಗರಿಕರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಿತ್ತು.ಅದೇ ರೀತಿ ಈ ನಿರ್ಧಾರ ಸಂಸತ್ತಿನ ಮೂಲಕ ಅಥವಾ ಸುಗ್ರೀವಾಜ್ಞೆಯ ಮೂಲಕ ನಡೆಯಬೇಕು. ಈ ಎಲ್ಲಾ ಕಾರಣದಿಂದ 2016 ನವೆಂಬರ್‌ 8ರ ನೋಟು ನಿಷೇಧದ ಅಧಿಸೂಚನೆ ಕಾನೂನಿಗೆ ವಿರುದ್ಧ ಮತ್ತು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!