ಯು ಟರ್ನ್ ಹೊಡೆದ ನಿಷೇಧಿತ ಉಗ್ರ ಸಂಘಟನೆ: ಪಹಲ್ಗಾಮ್ ದಾಳಿಯಲ್ಲಿ ಯಾವುದೇ ಪಾತ್ರವಿಲ್ಲ ಎಂದ TRF!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಜಮ್ಮುವಿನ ಪಹಲ್ಗಾಮ್ ಉಗ್ರ ದಾಳಿಯ ಹೊಣೆ ಹೊತ್ತುಕೊಂಡಿದ್ದ ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್(TRF) ಇದೀಗ ಯು ಟರ್ನ್ ಹೊಡೆದಿದ್ದು, ಈ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದು ಹೇಳಿಕೊಂಡಿದೆ.

ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ(LeT)ಗೆ ಅಂಗ ಸಂಘಟನೆ ಟಿಆರ್​​ಎಫ್, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ನಿರಾಕರಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು TRF ಹೊತ್ತುಕೊಂಡಿತ್ತು. ಇದೀಗ TRF ತನ್ನ ಪಾತ್ರವನ್ನು ನಿರಾಕರಿಸುತ್ತಿದೆ ಎಂದು ಭದ್ರತಾ ಮತ್ತು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.

‘ಕರುಣಾಮಯಿ ಅಲ್ಲಾಹನ ಹೆಸರಿನಲ್ಲಿ, ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ತಾನು ಭಾಗಿಯಾಗಿರುವುದನ್ನು ರೆಸಿಸ್ಟೆನ್ಸ್ ಫ್ರಂಟ್(TRF) ನಿಸ್ಸಂದಿಗ್ಧವಾಗಿ ನಿರಾಕರಿಸುತ್ತದೆ. ಈ ಕೃತ್ಯವನ್ನು TRF ಮಾಡಿದ ಎಂದು ಆರೋಪಿಸುವುದು ಸುಳ್ಳು, ಆತುರ ಮತ್ತು ಕಾಶ್ಮೀರಿ ಪ್ರತಿರೋಧವನ್ನು ಕೆಣಕಲು ಆಯೋಜಿಸಲಾದ ಅಭಿಯಾನದ ಭಾಗವಾಗಿದೆ’ ಎಂದು ಭಯೋತ್ಪಾದಕ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದೆ.

ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಪಹಲ್ಗಾಮ್ ದಾಳಿಯ ನಂತರ ಹೊಣೆ ಹೊತ್ತುಕೊಂಡ ‘ಅನಧಿಕೃತ’ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ ಎಂದು ಟಿಆರ್ ಎಫ್ ಹೇಳಿದೆ.

ಇದು ಸಂಘಟಿತ ಸೈಬರ್ ಅಪರಾಧದ ಪರಿಣಾಮ ಎಂದು ನಮಗೆ ತಿಳಿದು ಬಂದಿದೆ. ಅನಧಿಕೃತವಾಗಿ ಪೋಸ್ಟ್ ಮಾಡಿರುವುದನ್ನು ಪತ್ತೆಹಚ್ಚಲು ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಮತ್ತು ಆರಂಭಿಕ ತನಿಖೆಯಲ್ಲಿ ಇದು ಭಾರತೀಯ ಸೈಬರ್-ಗುಪ್ತಚರ ಕಾರ್ಯಕರ್ತರ ಕೈವಾಡವನ್ನು ಸೂಚಿಸುತ್ತದೆ ಎಂದು ಭಯೋತ್ಪಾದಕ ಸಂಘಟನೆ ತಿಳಿಸಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(MHA) 2023 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ TRF ಅನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!