ಹೊಸ ದಿಗಂತ ವರದಿ, ಕೊಪ್ಪಳ:
ಒಂದೂವರೆ ತಿಂಗಳ ಬಾಣಂತಿಯ ಮೃತ ದೇಹ ಸುಟ್ಟು ಕರುಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮಾವಾಸ್ಯೆ ದಿನದಂದೇ ಈ ಘಟನೆ ನಡೆದಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.
ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಒಂದೂವರೆ ತಿಂಗಳ ಬಾಣಂತಿ ನೇತ್ರಾವತಿ ಕುರಿ (26) ಮೃತದೇಹ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ.
ನಿಧಿ ಆಸೆಗಾಗಿ ಸೋಮವಾರ ತಡರಾತ್ರಿ ಬಾಣಂತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಸಾರ್ವಜನಿಕರು ಹಾಗೂ ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮವಾಸ್ಯೆ ಹಿನ್ನೆಲೆಯಲ್ಲಿ ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮನೆಯಿಂದ ಅಣತಿ ದೂರದಲ್ಲಿ ಸುಟ್ಟು ಕರಕಲಾಗಿರುವ ನೇತ್ರಾವತಿ ಶವ ಸಿಕ್ಕಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.