ಸೋಮಣ್ಣ ಪಕ್ಷ ತೊರೆಯುವುದಿಲ್ಲ, ಈ ಬಾರಿ ಅವರು ಚುನಾವಣೆಗೆ ನಿಲ್ಲುವುದು ಖಚಿತ: ಸಚಿವ ಅಶೋಕ್ ಸ್ಪಷ್ಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಸತಿ ಸಚಿವ ವಿ. ಸೋಮಣ್ಣ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಈ ಬಾರಿ ಅವರು ಚುನಾವಣೆಗೆ ನಿಲ್ಲುವುದು ಖಚಿತ. ಬಿಜೆಪಿ ಟಿಕೆಟ್​ನಿಂದಲೇ ಸೋಮಣ್ಣ ಸ್ಪರ್ಧೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸೋಮಣ್ಣ ಪಕ್ಷ ತೊರೆಯಲಿದ್ದಾರೆ ಎನ್ನುವುದು ಕೇವಲ ಊಹಾಪೋಹ ಮಾತ್ರ. ಯಾವ ಕಾರಣಕ್ಕೂ ಅವರು ಪಕ್ಷ ಬಿಡುವುದಿಲ್ಲ. ನಿನ್ನೆಯಷ್ಟೇ ಅವರು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಭೇಟಿ ಮಾಡಿ ಸಮಾಲೋಚನೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್​ನಿಂದ ಸೂಚನೆ ಬಂದಿದೆ. ಅದರಂತೆ ನಾನು ಚಾಮರಾಜನಗರದಲ್ಲಿ ಕೆಲಸ ಮಾಡಬೇಕು ಎಂದಿದ್ದೇನೆ. ಉಳಿದ ವಿಚಾರ ಖುದ್ದಾಗಿ ಮಾತನಾಡೋಣ ಎಂದಿದ್ದಾರೆ. ಅದರಂತೆ ಇಂದು ಅವರನ್ನು ಭೇಟಿ ಮಾಡಲಿದ್ದೇನೆ ಎಂದರು.

ಈ ಹಿಂದೆ ಕಾಂಗ್ರೆಸ್ ತೊರೆದಿದ್ದ ಬಾಬುರಾವ್ ಚಿಂಚನಸೂರ್ ನಮ್ಮ ಪಕ್ಷಕ್ಕೆ ಬಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಿಜೆಪಿಗೆ ಬಂದಿದ್ದೆ ಎಂದಿದ್ದರು. ಈಗ ಯಾವ ಮುಖ ಇರಿಸಿಕೊಂಡು ಕಾಂಗ್ರೆಸ್​ಗೆ ಹೋಗುತ್ತಿದ್ದಾರೋ ಗೊತ್ತಿಲ್ಲ ಎಂದು ಚಿಂಚನಸೂರ್ ಪಕ್ಷಾಂತರಕ್ಕೆ ಅಶೋಕ್ ವ್ಯಂಗ್ಯವಾಡಿದರು.

ಬಿಜೆಪಿ ತಲೆಕೆಡಿಸಿಕೊಳ್ಳಲ್ಲ : ನಮ್ಮಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮವಿದೆ. ನಮ್ಮಲ್ಲಿ ಎಂಎಲ್ಸಿ, ಎಂಪಿ ಆದವರಿಗೆ ಎಂಎಲ್‌ಎ ಟಿಕೆಟ್ ಕೊಡಲ್ಲ. ಆದರೆ ಚಿಂಚನಸೂರ್ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡಿದ್ದರೂ ಶಾಸಕರಾಗುವ ಆಸೆ ಅದಕ್ಕೆ ಹೋಗಿದ್ದಾರೆ. ಅದಕ್ಕೆ ಬಿಜೆಪಿ ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್​ನಿಂದ ಬಂದಿದ್ದರು ಕಾಂಗ್ರೆಸ್​ಗೆ ಹೋಗುತ್ತಿದ್ದಾರೆ ಅಷ್ಟೇ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!