ಹೊಸದಿಗಂತ ವರದಿ ಮಂಗಳೂರು:
ಏಕಾಏಕಿ ಮನೆಗೆ ನುಗ್ಗಿದ ಆಗಂತುಕನೋರ್ವ ಒಂದೇ ಕುಟುಂಬದ ನಾಲ್ವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿದ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ.
ಹಸೀನಾ (46), ಅಫ್ನಾನ್ (23, ಅಯ್ನಾಝ್ (21), ಆಸೀಮ್ (12) ಹತ್ಯೆಗೊಳಗಾದವರು.
ಅಟೋ ರಿಕ್ಷಾವೊಂದರಲ್ಲಿ ಬಂದಿದ್ದ ಸುಮಾರು ೪೫ ವರ್ಷ ವಯಸ್ಸಿನ ಆಗಂತುಕನೋರ್ವ ಈ ಮನೆಗೆ ನುಗ್ಗಿದ್ದು, ಬಳಿಕ ಮನೆಮಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ಈ ನಡುವೆಯೇ ಆತ ಮೂವರಿಗೆ ಚೂರಿಯಿಂದ ಇರಿದಿದ್ದು, ಹೊರಗೆ ಆಟವಾಡುತ್ತಿದ್ದ ವೇಳೆ ಮನೆಯೊಳಗಿಂದ ಕಿರುಚಾಟ ಕೇಳಿ ಬಂದ ಆಸೀಮ್‌ಗೂ ಆತ ಚೂರಿಯಿಂದ ಇರಿದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದೇ ಸಂದರ್ಭ ಮನೆಯಲ್ಲಿ ಗದ್ದಲ ಕೇಳಿ ಓಡಿ ಬಂದಿದ್ದ ಪಕ್ಕದ ಮನೆಯ ಯುವತಿಯನ್ನು ಆತ ಬೆದರಿಸಿ ಓಡಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಉಡುಪಿ ಜಿಲ್ಲೆಯನ್ನೇ ಈ ಘಟನೆ ಬೆಚ್ಚಿಬೀಳಿಸಿದ್ದು, ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.