ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ಬಾರುಕೋಲು ಚಳವಳಿ

ಹೊಸದಿಗಂತ ವರದಿ ಮಂಡ್ಯ :

ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ರೈತರು ಚಡ್ಡಿ ಮೆರವಣಿಗೆ ಮಾಡಿದರೆ, ಮಹಿಳಾ ರೈತರು ಬಾರುಕೋಲು ಚಳವಳಿ ನಡೆಸಿದರು.

ರೈತರು ನಡೆಸುತ್ತಿದ್ದ ಬೈಕ್ ರ್ಯಾಲಿಯಲ್ಲಿ ಕನ್ನಡ, ದಲಿತ, ಪ್ರಗತಿಪರ, ಮುಸ್ಲಿಂಘಿ ಸಂಘಟನೆಗಳ ಕಾರ‌್ಯಕರ್ತರು, ವಿದ್ಯಾರ್ಥಿಗಳು, ಚಾಲಕರು ಸಹ ಭಾಗವಹಿಸಿದ್ದರು. ರೈತರು ಟ್ರಾಕ್ಟರ್ ಮತ್ತು ಎತ್ತಿನ ಗಾಡಿಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರಿನ ರೈತರು ಚಡ್ಡಿ ಮೆರವಣಿಗೆ ಮಾಡಿದರೆ, ರೈತ ಮಹಿಳೆಯರು ಬಾರುಕೋಲು ಚಳವಳಿ ನಡೆಸಿದರು.
ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಹಲವು ಸಂಘಟನೆಗಳ ಬೆಂಬಲದೊಂದಿಗೆ ವಿಭಿನ್ನ ರೀತಿಯಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಸಚಿವರು ಬಂದು ಭರವಸೆ ನೀಡಿದರಾದರೂ ಕಬ್ಬು, ಹಾಲಿನ ದರ ನಿಗದಿ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಕಿಡಿ ಕಾರಿದರು.
ಸರ್ಕಾರ ರೈತರ ಬೇಡಿಕೆ ಈಡೇರಿಸದೆ ಉದಾಶೀನ ತಾಳಿದೆ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿ ಹೋಗಿದ್ದಾರೆ. ರೈತರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲಕರು ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಸರ್ಕಾರದ ಭಾಗವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಬ್ಬಿಗೆ ದರ ಹೆಚ್ಚಳ ಮಾಡುವಲ್ಲಿ ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಮಾಲೀಕರು ಕೇವಲ ಸಕ್ಕರೆ ದರವನ್ನು ಮಾತ್ರ ಕಬ್ಬು ದರ ನಿಗದಿಗೆ ಮಾನದಂಡವಾಗಿ ತೆಗೆದುಕೊಳ್ಳುತ್ತಿದ್ದಾರೆಯೇ ಹೊರತು, ಉಪ ಉತ್ಪನ್ನಗಳಾದ ಸಹ ವಿದ್ಯುತ್ ಘಟಕ, ಡಿಸ್ಟಿಲರಿ ಸೇರಿದಂಎತ ಉಪ ಉತ್ಪನ್ನಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಎಲ್ಲ ಉತ್ಪನ್ನಗಳಿಂದಲೂ ಮಾಲೀಕರು ಲಾಭವನ್ನು ಪಡೆಯುತ್ತಿದ್ದಾರೆ. ಅದರಲ್ಲಿ ರೈತರಿಗೆ ಪಾಲು ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!