ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಲಿಕೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪಾಲಿಸದ ನಗರದ 21 ಪೇಯಿಂಗ್ ಗೆಸ್ಟ್ ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಂದ್ ಮಾಡಿಸಿದೆ.
ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ ಬಿಬಿಎಂಪಿ ವಿಶೇಷ ಆಯುಕ್ತ ಸುರಳಕರ್ ವಿಕಾಸ್ ಕಿಶೋರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 2,193 ಅಧಿಕೃತ ಪಿಜಿಗಳಿವೆ. ಈ ಪೈಕಿ 1,578 ಪಿಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು, 615 ಪಿಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಮಾರ್ಗಸೂಚಿ ಪಾಲಿಸದವರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ನಿಯಮ ಪಾಲಿಸದ ಪಿಜಿಗಳ ಸೀಲ್ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಬಿಎಂಪಿಯಿಂದ ಉದ್ದಿಮೆ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ಹಾಗೂ ಮಾರ್ಗಸೂಚಿ ಪಾಲಿಸದ ಪಿ.ಜಿ.ಗಳಿಗೆ 2-3 ಬಾರಿ ನೋಟೀಸ್ ನೀಡಲಾಗಿದೆ. ಇದಕ್ಕೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಸಂಬಂಧ ಪಿಜಿಗಳನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಹಾಗೂ 308ರಡಿಯಲ್ಲಿ ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅಧಿಕೃತ ಪಿಜಿ ಹಾಗೂ 20 ಅನಧಿಕೃತ ಸೇರಿ 21 ಪಿಜಿಗಳು ಮಾರ್ಗಸೂಚಿ ಅನುಸರಿಸದ ಕಾರಣ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.