ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 15 ರೊಳಗೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಚಿಕ್ಕಪೇಟೆ ಜಂಕ್ಷನ್‌ನಿಂದ ಸುಲ್ತಾನ್‌ಪೇಟೆ ಜಂಕ್ಷನ್‌ವರೆಗೆ 190 ಮೀಟರ್ ಉದ್ದದ ವೈಟ್‌ಟಾಪ್ ಕಾಮಗಾರಿ ಪರಿಶೀಲನೆ ನಡೆಸಲಾಗಿದ್ದು, ಒಂದು ಕಡೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ಬದಿಯಲ್ಲಿ ಕಾಂಕ್ರೀಟ್ ಹಾಕಲಾಗಿದ್ದು, ಕ್ಯೂರಿಂಗ್ ಮಾಡಲಾಗುತ್ತಿದೆ. ಡಿಸೆಂಬರ್ 15ರೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.
ಕಾಮಗಾರಿ ಮುಗಿದ ನಂತರ ರಸ್ತೆಯ ಮಧ್ಯದಲ್ಲಿರುವ ಹಳೆಯ ಮೀಡಿಯನ್‌ಗಳನ್ನು ತೆಗೆದು ಹೊಸ ಪ್ರಿಕಾಸ್ಟ್ ಮೀಡಿಯನ್‌ಗಳನ್ನು ಹಾಕಿ ಫುಟ್‌ಪಾತ್ ಸಮತಟ್ಟು ಮಾಡಬೇಕು. ಸುಲ್ತಾನಪೇಟೆ ಜಂಕ್ಷನ್ ವಿಭಾಗವನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.