ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಯೋಜನೆ ‘ಕುಕುರ್ ತಿಹಾರ್’ಗೆ ಬಿಬಿಎಂಪಿ ಗುರುವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.
ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಗುರುವಾರ ಶ್ವಾನ ಮಹೋತ್ಸವ (ಕುಕುರ್ ತಿಹಾರ್) ಆಚರಿಸಲಾಗಿದ್ದು, ಪಾಲಿಕೆ ಕೇಂದ್ರ ಕಛೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಸುರಳಕರ್ ವಿಕಾಸ್ ಅವರು, ಸಹಬಾಳ್ವೆ ಹಾಗೂ ಒನ್ ಹೆಲ್ತ್ ಭಾಗವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಪ್ರಾಯೋಗಿಕ ಹಂತದಲ್ಲಿ ಪಾಲಿಕೆಯು ಎಂಟು ವಲಯಗಳಲ್ಲಿ ಎಂಟು ಸ್ಥಳಗಳನ್ನು ಗುರುತಿಸಿ, ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದ್ದು, ಈ ಯೋಜನ ಯಶಸ್ವಿಯಾದರೆ ನಗರದಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆಯ 8 ವಲಯಗಳಲ್ಲಿ ಗುರುತಿಸಿರುವ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬೌಲ್, ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ನಾಮಫಲಕದ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ತಿಂಗಳ ಕಾಲ ಇದನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು. ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ – ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಏನಾದರು ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಪಾಲಿಕೆಯ ಎಲ್ಲಾ ಕಡೆ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.