ಬಿಬಿಎಂಪಿ ಕಚೇರಿ ಅಗ್ನಿ ಅವಘಡ ಪ್ರಕರಣ: ಮೂರು ಇಲಾಖೆಗಳಿಂದ ತನಿಖೆ ನಡೆಸಲು ಡಿಸಿಎಂ ಸೂಚನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ತಗುಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಇಲಾಖೆಗಳಿಂದ ಸಮಗ್ರ ತನಿಖೆ ಮಾಡಲು ಸೂಚನೆ ನೀಡಿದ್ದೇನೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವ ನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ತನಿಖೆಗೆ ಆದೇಶ ನೀಡಿದ್ದೇನೆ.‌ ಒಂದು ಬಿಬಿಎಂಪಿ ವತಿಯಿಂದ ತನಿಖೆ ನಡೆಯಲಿದೆ. ಎರಡನೇಯದ್ದು ಪೊಲೀಸರಿಂದ, ಮೂರನೇಯದ್ದು, ವಿದ್ಯುತ್ ಪರಿವೀಕ್ಷಣಾ ಇಲಾಖೆಯಿಂದ ತನಿಖೆಗೆ ನಡೆಸಲು ಸೂಚನೆ ನೀಡಿದ್ದೇನೆ. ಮೂರು ಇಲಾಖೆಗಳಿಂದಲೂ ತನಿಖೆ ನಡೆಯಲಿದೆ ಎಂದರು.

ಈ ಹಿಂದೆಯೂ ಬೆಂಕಿ ಬಿದ್ದಿತ್ತು. ಕಡತಗಳನ್ನು ಮುಚ್ಚಿ ಹಾಕುವ ಯತ್ನ ನಡೆದಿತ್ತು. ಈ ಘಟನೆ ನಡೆದಾಗ ಪಕ್ಕದಲ್ಲೇ ಕಡತಗಳು ಇತ್ತು. ದುರದೃಷ್ಟವಶಾತ್ ಅಧಿಕಾರಿಗಳಿಗೆ ಗಾಯವಾಗಿದೆ. ಕಡತಕ್ಕೆ ಏನೂ ಹಾನಿಯಾಗಿಲ್ಲ. ಅದನ್ನೆಲ್ಲಾ ಸ್ಥಳಾಂತರ ಮಾಡುತ್ತಿದ್ದೇವೆ. ಕಡತಗಳನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ. ಅವರಿಗೆ ಏನೆಲ್ಲಾ ಸೂಚನೆ ಕೊಡಬೇಕು ಕೊಟ್ಟಿದ್ದೇನೆ ಎಂದರು.

ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದ ಘಟನೆಯ ಹಿಂದೆ ಬಿಜೆಪಿ ಇದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆಶಿ, ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿರಬಹುದು. ಆದರೆ, ಅದನ್ನು ನಾನು ಒಪ್ಪಲು ಸಾಧ್ಯವಿಲ್ಲ. ಆ ಟ್ವೀಟ್ ಅನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!