ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ಗರಿಷ್ಠ 7 ಪಾಲಿಕೆಗಳನ್ನಾಗಿ ಬಿಬಿಎಂಪಿಯನ್ನು ವಿಂಗಡಿಸುವುದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಶಿವಾಜಿನಗರದ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ವರದಿಯನ್ನು ಮಂಡನೆ ಮಾಡಲಾಯಿತು.
ವರದಿಯಲ್ಲಿನ ಶಿಫಾರಸುಗಳ ಪ್ರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯಿದೆ ಅಧಿಸೂಚನೆ ಜಾರಿಯಾದ ತಕ್ಷಣ ಅನುಷ್ಟಾನಕ್ಕೆ ಬರಲಿದೆ. ಗ್ರೇಟರ್ ಬೆಂಗಳೂರಿನಲ್ಲಿ 7 ಕ್ಕೂ ಮೀರದಂತೆ ಮಹಾನಗರ ಪಾಲಿಕೆಗಳಿರಬೇಕು ಎಂದು ಸಲಹೆ ನೀಡಲಾಗಿದೆ. ಮೇಯರ್ ಮತ್ತು ಉಪಮೇಯರ್ ಅವರ ಅವಧಿಯನ್ನು 30 ತಿಂಗಳುಗಳಾಗಿರಲು ಸಮಿತಿ ಶಿಫಾರಸು ಮಾಡಿತು. ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಲು ಸಹ ಸೂಚಿಸಿತು.
ಪ್ರತಿ ಪಾಲಿಕೆಯು ಕನಿಷ್ಠ 10 ಲಕ್ಷ ಲಕ್ಷ ಜನಸಂಖ್ಯೆ ಹೊಂದಿರಬೇಕು. ಜನಸಾಂದ್ರತೆ ಪ್ರತಿ ಕಿ.ಮೀ.ಗೆ 5 15 ಸಾವಿರಕ್ಕಿಂತ ಕಡಿಮೆ ಇರಬಾರದು. ಸ್ಥಳೀಯ ಆಡಳಿತದಿಂದ ವರ್ಷಕ್ಕೆ ಗರಿಷ್ಠ 300 ಕೋಟಿಗೂ ಹೆಚ್ಚಿನ ಆದಾಯ ಇರಬೇಕು. ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಪ್ರಮಾಣ ಶೇ.50 ಕ್ಕಿಂತಲೂ ಕಡಿಮೆ ಇರಬಾರದು ಎಂದು ಉಲ್ಲೇಖಿಸಲಾಗಿದೆ.