ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿನ ಪಿಜಿಗಳ ಪ್ರಸ್ತಾವಿತ ಮಾರ್ಗಸೂಚಿ ಪರಿಷ್ಕರಿಸಲು ಹಾಗೂ ನಿಯಮಗಳ ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸಲು ಬಿಬಿಎಂಪಿ ನಿರ್ಧರಿಸಿದ್ದು, ಪಿಜಿಗಳ ಮಾಲೀಕರು ತುಸು ನಿರಾಳವಾಗುವ ಸಾಧ್ಯತೆಯಿದೆ.
ಪಿಜಿ ಮಾಲೀಕರ ನಿಯೋಗವೊಂದು ಇತ್ತೀಚಿಗೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಶ್ ಕಿಶೋರ್ ಅವರನ್ನು ಭೇಟಿ ಮಾಡಿದ್ದು, ಪ್ರತಿ ವ್ಯಕ್ತಿ ವಾಸಿಸುವ ಜಾಗ ಸೇರಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿತು.
ಪ್ರಸ್ತಾವಿತ ಮಾರ್ಗಸೂಚಿಯಲ್ಲಿರುವಂತೆ ಪ್ರತಿ ವ್ಯಕ್ತಿಗೆ 70 ಚದರ ಅಡಿ ಜಾಗ ಬದಲಿಗೆ 35 ಚದರ ಅಡಿ ಇರುವಂತೆ ಅವಕಾಶ ನೀಡಬೇಕು, ಸಿಸಿಟಿವಿ ದೃಶ್ಯಗಳ ಸಂರಕ್ಷಣೆಗೆ 90 ದಿನಗಳ ಬದಲಿಗೆ ಒಂದು ತಿಂಗಳು ಇರುವಂತೆ ಮಾರ್ಗಸೂಚಿ ಇರುವಂತೆ ಪರಿಷ್ಕರಿಸಬೇಕು ಎಂದು ಮಾಲೀಕರು ಬಿಬಿಎಂಪಿಗೆ ಮನವಿ ಮಾಡಿದರು.
ಪಿಜಿ ಮಾಲೀಕರ ಕಳವಳ ಸರಿಯಾಗಿರುವಂತೆ ತೋರುತ್ತಿದ್ದು, ಅವರ ಮನವಿಯನ್ನು ಮುಖ್ಯ ಆಯುಕ್ತರಿಗೆ ರವಾನಿಸುವುದಾಗಿ ಕಿಶೋರ್ ಹೇಳಿದರು. ಈ ಮೊದಲು ಮಾರ್ಗಸೂಚಿ ಹೊರಡಿಸಿದ್ದ ಬಿಬಿಎಂಪಿ ಅವುಗಳ ಅಳವಡಿಕೆಗೆ ಸೆಪ್ಟೆಂಬರ್ 15ರ ಗಡುವು ನೀಡಿತ್ತು. ಮಾರ್ಗಸೂಚಿ ಪಾಲಿಸದಿದ್ದರೆ ಕಟ್ಟಡಗಳನ್ನು ಸೀಲ್ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಪ್ರತಿ ವ್ಯಕ್ತಿಗೆ 70 ಚದರ ಅಡಿ ಜಾಗ ಮತ್ತು 90 ದಿನಗಳವರೆಗೆ ಸಿಸಿಟಿವಿ ದೃಶ್ಯಗಳ ಸಂಗ್ರಹ ಮುಂತಾದ ಮಾರ್ಗಸೂಚಿಗಳನ್ನು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ವಿರೋಧಿಸಿದೆ.