ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ತವರಿನಲ್ಲಿ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯ ಸೋಲನುಭವಿದ್ದ ಟೀಮ್ ಇಂಡಿಯಾ, ಆ ಬಳಿಕ ಆಸ್ಟ್ರೇಲಿಯಾದಲ್ಲೂ ಟೆಸ್ಟ್ ಸರಣಿ ಸೋತಿದೆ. ಈ ಸೋಲುಗಳ ಬೆನ್ನಲ್ಲೇ ಈ ಹಿಂದೆಯಿದ್ದ ಕೆಲ ನಿಯಮಗಳನ್ನು ಮತ್ತೆ ಜಾರಿಗೊಳಿಸಲು ಬಿಸಿಸಿಐ ಮುಂದಾಗಿದೆ.
ಏನಿದು ಹೊಸ ನಿಯಮ?
ಮುಂಬರುವ ಸರಣಿಗಳ ವೇಳೆ ಟೀಮ್ ಇಂಡಿಯಾ ಆಟಗಾರರ ಪತ್ನಿಯರು ಇಡೀ ಸರಣಿಯಲ್ಲಿ ಜೊತೆಗಿರುವಂತಿಲ್ಲ. ಅಂದರೆ ಪತ್ನಿಯರು ಮತ್ತು ಕುಟುಂಬ ಸದಸ್ಯರು ಪ್ರವಾಸದ ಸಂಪೂರ್ಣ ಅವಧಿಯಲ್ಲಿ ತಂಡದೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ.
45 ದಿನಗಳ ಸರಣಿಯಾಗಿದ್ದರೆ ಎರಡು ವಾರಗಳ ಕಾಲ ಜೊತೆಯಾಗಿ ಉಳಿಯಬಹುದು. ಅಲ್ಲದೆ ಅಲ್ಪಾವಧಿಯ ಸರಣಿಗಳ ವೇಳೆ ಪತ್ನಿಯರು/ಕುಟುಂಬಸ್ಥರು ಜೊತೆಗಿರಬೇಕಾದ ಮಿತಿಯನ್ನು 7 ದಿನಗಳ ಕಾಲಕ್ಕೆ ಸೀಮಿತಗೊಳಿಸಲಾಗುತ್ತದೆ.
ಟೀಮ್ ಇಂಡಿಯಾ ಆಟಗಾರರು ಒಂದೇ ಬಸ್ನಲ್ಲಿ ಪ್ರಯಾಣಿಸಬೇಕೆಂಬ ನಿಯಮವನ್ನು ಸಹ ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲ ಸ್ಟಾರ್ ಆಟಗಾರರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿತ್ತು.