ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಏಕೈಕ ನಾಯಕರಾಗಿದ್ದಾರೆ.
ಧೋನಿ (MS Dhoni) ಅವರು 15 ಆಗಸ್ಟ್ 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಧೋನಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಾತ್ರ ಆಡುತ್ತಾರೆ. ಇದೀಗ ಧೋನಿ ನಿವೃತ್ತಿಯಾದ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಕ್ರಿಕೆಟ್ ಲೋಕದಲ್ಲಿ ಧೋನಿ ಜೊತೆಗೆ ಅವರ ಜೆರ್ಸಿ ಸಂಖ್ಯೆ 7 ಕೂಡ ಅಷ್ಟೇ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ.
2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಅವರ ನಾಯಕತ್ವದಲ್ಲಿ, ತಂಡವು ಮತ್ತೊಮ್ಮೆ 2014 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿತು. ಆದರೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 2011ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಇದೀಗ ಈ ಶ್ರೇಷ್ಠ ನಾಯಕನ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ವರದಿಯ ಪ್ರಕಾರ, ಧೋನಿಯ ನಂಬರ್-7 ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ಮುಂದಾಗಿದೆ. ಟೀಮ್ ಇಂಡಿಯಾದಲ್ಲಿರುವಾಗ ಆಟಗಾರರು ನಂಬರ್-7 ಜರ್ಸಿಯನ್ನು ಧರಿಸುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಭಾರತದ ಮುಂದಿನ ಯಾವುದೇ ಆಟಗಾರರು ಮತ್ತು ಪ್ರಸ್ತುತ ಆಟಗಾರರು ಜೆರ್ಸಿ ನಂಬರ್-7 ಧರಿಸುವಂತಿಲ್ಲ ಎಂದು ಬಿಸಿಸಿಐ ತಿಳಿಸಿದೆ.