ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯುವುದು ಅದೆಷ್ಟೋ ಜನರಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಅನುಭವ ನೀಡುತ್ತದೆ. ಆದರೆ, ಈ ‘ಚಹಾ ಪ್ರೀತಿ’ ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಂಬ ಕಹಿ ಸತ್ಯ ಈಗ ಹೊರಬಿದ್ದಿದೆ. ನೀವು ತಯಾರಿಸಿದ ಚಹಾವನ್ನು ದೀರ್ಘಕಾಲ ಇಟ್ಟು ಅಥವಾ ತಣ್ಣಗಾದ ಮೇಲೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ಹೊಂದಿದ್ದರೆ, ಇಂದೇ ಎಚ್ಚೆತ್ತುಕೊಳ್ಳಿ.
ಆರೋಗ್ಯ ತಜ್ಞರ ಪ್ರಕಾರ, ಚಹಾ ತಯಾರಿಸಿದ 15 ರಿಂದ 20 ನಿಮಿಷಗಳ ಒಳಗೆ ಅದನ್ನು ಸೇವಿಸಬೇಕು. ಸಮಯ ಕಳೆದಂತೆ ಚಹಾದಲ್ಲಿ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಚೀನಾದಲ್ಲಿ ಹಳಸಿದ ಚಹಾವನ್ನು ವಿಷವೆಂದು ಪರಿಗಣಿಸಿದರೆ, ಜಪಾನಿಯರು 24 ಗಂಟೆ ಕಳೆದ ಚಹಾ ಸೇವನೆಯನ್ನು ‘ಹಾವು ಕಡಿತಕ್ಕೆ’ ಹೋಲಿಸುತ್ತಾರೆ.
ಮತ್ತೆ ಬಿಸಿ ಮಾಡುವುದು ಯಾಕೆ ಅಪಾಯ?
ಪೋಷಕಾಂಶಗಳ ನಾಶ: ಚಹಾವನ್ನು ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಮತ್ತು ಉತ್ತಮ ಅಂಶಗಳು ನಾಶವಾಗುತ್ತವೆ.
ಆಮ್ಲೀಯತೆ: ಹಾಲಿನಿಂದ ಮಾಡಿದ ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.
ಲಿವರ್ ಮೇಲೆ ಪರಿಣಾಮ: ಕೆಟ್ಟ ಬ್ಯಾಕ್ಟೀರಿಯಾಗಳು ಸೇರಿದ ಚಹಾ ನೇರವಾಗಿ ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ.
ಹಾಲಿನ ಚಹಾವನ್ನು ಕೋಣೆಯ ಉಷ್ಣಾಂಶದಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಒಂದು ವೇಳೆ ಫ್ರಿಡ್ಜ್‌ನಲ್ಲಿ ಇಟ್ಟರೂ ಅದನ್ನು ಮರುಬಳಕೆ ಮಾಡುವುದು ಉತ್ತಮವಲ್ಲ. ಇನ್ನು ಶುಂಠಿ ಚಹಾ ಆರೋಗ್ಯಕ್ಕೆ ಒಳ್ಳೆಯದಾದರೂ, ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಶುಂಠಿ ಬಳಸುವುದರಿಂದ ಎದೆಯುರಿ ಕಾಣಿಸಿಕೊಳ್ಳಬಹುದು.
ಆಯುರ್ವೇದದ ಪ್ರಕಾರ, ಸಂಗ್ರಹಿಸಿಟ್ಟ ಅಥವಾ ಮತ್ತೆ ಬಿಸಿ ಮಾಡಿದ ಚಹಾ ದೇಹದಲ್ಲಿ ‘ವಿಷ’ ಉತ್ಪಾದಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಮಂದಗೊಳಿಸಿ, ದೇಹದ ಒಟ್ಟಾರೆ ಚಯಾಪಚಯ ಕ್ರಿಯೆಗೆ ಅಡ್ಡಿಪಡಿಸುತ್ತದೆ.

