Be Brave | ಅಂತರಂಗದಲ್ಲಿ ಸಾಧಿಸುವ ಛಲ, ಗೆಲುವಿನ ಹಸಿವಿದ್ದಾಗ.. ಬಹಿರಂಗದ ದುರ್ಬಲತೆ ನೆಪ ಮಾತ್ರ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಗವಿಕಲತೆ, ಕನಸುಗಳಿವೆ ಅಡ್ಡಿ ಬರುವುದಿಲ್ಲ ಅದು ಸಾಧನೆಗೆ ಒಯ್ಯುವ ಪಥವನ್ನಾಗಿ ಮಾಡಬಹುದು ಎಂಬುದಕ್ಕೆ ಮುಹಮ್ಮದ್ ಸಮರ್ ಒಬ್ಬ ಜೀವಂತ ಉದಾಹರಣೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಉರ್ದು ವಿಭಾಗದಿಂದ ಪಿಎಚ್‌ಡಿ ಪಡೆದ ಮೊದಲ ದೃಷ್ಟಿಹೀನ ಪುರುಷ ವಿದ್ಯಾರ್ಥಿಯಾಗಿ, ತಮ್ಮ ಸಾಧನೆಯ ಮೂಲಕ ಪ್ರೇರಣೆಯ ದೀಪವಾಗಿದ್ದಾರೆ. ಕಠಿಣ ಸವಾಲುಗಳನ್ನು ಎದುರಿಸುತ್ತಾ, ನಿರಂತರ ಪರಿಶ್ರಮ ಮತ್ತು ಅದಮ್ಯ ಇಚ್ಛಾಶಕ್ತಿಯೊಂದಿಗೆ ಶಿಕ್ಷಣವನ್ನು ಮುಗಿಸಿ, ಇತರ ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗುವ ಕನಸು ಕಾಣುತ್ತಿರುವ ಅವರ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಉತ್ತರ ಪ್ರದೇಶದ ಅಲಿಘರ್‌ನ ಉಪಾರ್ಕೋಟ್ ಪ್ರದೇಶದ ವಾಸಿಯಾದ ಸಮರ್, ತನ್ನ ಶಿಕ್ಷಣ ಪ್ರಯಾಣವನ್ನು ಅಹ್ಮದಿ ಶಾಲೆಯಿಂದ ಪ್ರಾರಂಭಿಸಿದರು. ನಂತರ ಮಿಂಟೋ ಸರ್ಕಲ್‌ನಲ್ಲಿ 12ನೇ ತರಗತಿಯವರೆಗೆ ಓದಿ, ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಹಾಗೂ ಉರ್ದು ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಅಂತಿಮವಾಗಿ, ಪಿಎಚ್‌ಡಿ ಪದವಿಯನ್ನು ಸಂಪಾದಿಸಿ, ಶೈಕ್ಷಣಿಕ ಪ್ರಗತಿಯ ಕಿರೀಟವನ್ನು ತಮ್ಮದಾಗಿಸಿಕೊಂಡರು.

ಆದರೆ, ಈ ಸಾಧನೆಗಳಿಗೆ ಪಥ ಸುಗಮವಾಗಿರಲಿಲ್ಲ. ದೃಷ್ಟಿಹೀನತೆಯ ಜೊತೆಗೆ ಅವರು ಎದುರಿಸಿದ ಸವಾಲುಗಳು ಅಸಂಖ್ಯ. ಪಠ್ಯಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಲಭ್ಯವಿರದೆ, ಅಕ್ಷರಶಃ ಕತ್ತಲಿನಲ್ಲೇ ಹೊಸ ಬೆಳಕನ್ನು ಹುಡುಕಬೇಕಾಯಿತು. ಸಹವರ್ತಿಗಳ ಸಹಾಯದೊಂದಿಗೆ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಅವರ ಪಿಎಚ್‌ಡಿ ಅವಧಿಯಲ್ಲಿ, ವಿಶ್ವವಿದ್ಯಾಲಯದ ಬ್ರೈಲ್ ಮುದ್ರಕ ಕೆಟ್ಟುಹೋದಾಗ, ಅಗತ್ಯವಿರುವ ಸಾಮಗ್ರಿಗಳನ್ನು ಪಡೆದುಕೊಳ್ಳುವುದು ಮತ್ತಷ್ಟು ಕಠಿಣವಾಯಿತು.

ಇಂತಹ ಸಂಕಷ್ಟಗಳ ನಡುವೆಯೂ, ಅವರ ನಿರ್ಧಾರವು ಅಚಲನಾಗಿತ್ತು. “ನನ್ನ ಕನಸುಗಳು, ಇತರರ ಕನಸುಗಳಂತೆ ಸಮಾನವಾಗಿವೆ. ಇದನ್ನು ಯಾವುದೇ ದಾರಿ ಮುಚ್ಚಲಾರದು” ಎಂಬ ನಂಬಿಕೆ, ಅವರನ್ನು ಸದಾ ಮುನ್ನಡೆಸಿತು.

ಈಗ, ಪಿಎಚ್‌ಡಿ ಪಡೆದ ಸಮರ್, ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ನಿರೀಕ್ಷಿಸುತ್ತಿದ್ದಾರೆ. ಎಎಂಯು ಸೇರಿದಂತೆ ಹಲವಾರು ಕಾಲೇಜುಗಳಿಗೆ ಅವರು ಅರ್ಜಿ ಸಲ್ಲಿಸಿದ್ದು, ತನ್ನಂತಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಅವಕಾಶ ದೊರಕುವ ನಿರೀಕ್ಷೆಯಲ್ಲಿದ್ದಾರೆ. “ಅಂಗವೈಕಲ್ಯ ಶಿಕ್ಷಣಕ್ಕೆ ಅಡ್ಡಿಯಲ್ಲ” ಎಂಬ ಸಂದೇಶವನ್ನು ತನ್ನ ಜೀವನದಿಂದಲೇ ಜಗತ್ತಿಗೆ ತೋರಿಸಿದ್ದಾರೆ ಮುಹಮ್ಮದ್ ಸಮರ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!