ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿಗೆ ಕೇಕ್ ನೀಡುವಾಗ ಅಥವಾ ನೀವೇ ಕೇಕ್ ತಿನ್ನುವಾಗ ಆಲೋಚನೆ ಮಾಡಿ ಯಾಕಂತ ತಿಳ್ಕೊಬೇಕಾದ್ರೆ ಈ ಸ್ಟೋರಿ ಕಂಪ್ಲೀಟ್ ಆಗಿ ಓದಿ..
ಹಳಸಿದ ಕೇಸ್ ತಿಂದು 5 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆಯೊಂದು ಕೆಪಿ ಅಗ್ರಹಾರದ ಭುವನೇಶ್ವರಿ ನಗರದಲ್ಲಿ ಸೋಮವಾರ ನಡೆದಿದೆ.
ಮೃತ ಬಾಲಕನನ್ನು ಬಿ.ಧೀರಜ್ ಎಂದು ಗುರ್ತಿಸಲಾಗಿದೆ. ವಿಷಯುಕ್ತ ಆಹಾರ ಸೇವನೆಯೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ನಡುವೆ ಬಾಲಕನ ಪೋಷಕರಾದ ಬಾಲರಾಜ್ (42) ಹಾಗೂ ತಾಯಿ ನಾಗಲಕ್ಷ್ಮೀ (35) ಅವರಿಗ ವಿವಿ ಪುರಂನ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಮೂವರಿಗೂ ಹಳಸಿದ ಕೇಕ್ ತಿಂದ ಕೂಡಲೇ ವಾಂತಿ ಹಾಗೂ ಅತಿಸಾರದ ಲಕ್ಷಣಗಳು ಕಂಡು ಬಂದಿದೆ. ಕೇಕ್ ಜೊತೆಗೆ ಅನ್ನ ಹಾಗೂ ಹಪ್ಪಳವನ್ನು ಸೇವನೆ ಮಾಡಿರುವುದಾಗಿ ಬಾಲಕನ ತಂದೆ ಹೇಳಿಕೊಂಡಿದ್ದಾರೆ.
ಬೆಳಿಗ್ಗೆ 9.30ರ ಸುಮಾರಿಗೆ ದೂರವಾಣಿ ಕರೆ ಬಂದಿತ್ತು. ಬಳಿಕ ಕೆಂಗೇರಿಯಲ್ಲಿದ್ದ ಮಗನ ಮನೆಗೆ ಹೋಗಿ, ಅಲ್ಲಿಂದ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದೆವು. ಆಸ್ಪತ್ರೆಯಲ್ಲಿ ಮಗ ಬಾಲರಾಜ್ ಮಧ್ಯಾಹ್ನ ಊಟಕ್ಕೆ ಮನೆಯ ಬಳಿಯ ಅಂಗಡಿಯಿಂದ ಹಪ್ಪಳ ಖರೀದಿಸಿರುವುದಾಗಿ ಹಾಗೂ ನಾನು ಮೂರು, ಹೆಂಡತಿ ಎರಡು ಹಾಗೂ ಪುತ್ರ ಧೀರಜ್ ಒಂದು ಹಪ್ಪಳ ಸೇವನೆ ಮಾಡಿರುವುದಾಗಿ ಹೇಳಿದ್ದ. ಹಪ್ಪಳ ತಿಂದ ಬಳಿಕ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಸಾಮಾನ್ಯ ಎಂದು ನಿರ್ಲಕ್ಷಿಸಿದ್ದೆವು. ಸಂಜೆ ಕೇಕ್ ತಿಂದ ಬಳಿಕ ಹೊಟ್ಟೆನೋವು ತೀವ್ರಗೊಂಡಿತ್ತು ಎಂದು ಬಾಲರಾಜ್ ಹೇಳಿದ ಎಂದು ಅವರ ತಾಯಿ ಚಾಮುಂಡೇಶ್ವರಿಯವರು ಹೇಳಿದ್ದಾರೆ.
ಮೊಮ್ಮಗಳು ನನ್ನೊಂದಿಗೆ ಇದ್ದಳು. ಹೀಗಾಗಿ ಆಕೆ ಅದೃಷ್ಟವಶಾತ್ ಪಾರಾಗಿದ್ದಾಳೆಂದು ಚಾಮುಂಡೇಶ್ವರಿ ತಿಳಿಸಿದ್ದಾರೆ. ಅತಿಸಾರ ಹಿನ್ನೆಲೆಯಲ್ಲಿ ಮೂವರೂ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಕಾಯಲಾಗುತ್ತಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣಗಳು ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಆಸ್ಪತ್ರೆ ಅಧಿಕಾರಿಗಳು ಮೆಡಿಕೋ ಲೀಗಲ್ ಪ್ರಕರಣ ದಾಖಲಿಸಿಕೊಂಡು ಕೆಪಿ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಳ್ಳಬೇಕಾಗಿದ್ದು, ಎಲ್ಲಾ ಆಯಾಮಗಳಿಂದಲೂ ಪ್ರಕರಣ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.