Wednesday, June 7, 2023

Latest Posts

ಜನರ ಜೊತೆ ಸ್ನೇಹಿಯಾಗಿ, ಗೌರವದಿಂದ ನಡೆದುಕೊಳ್ಳಿ , ಅನುಚಿತವಾಗಿ ನಡೆದುಕೊಂಡರೆ ಕಠಿಣ ಕ್ರಮ: ಎಸ್ಪಿ ಜಯಪ್ರಕಾಶ

ಹೊಸ ದಿಗಂತ ವರದಿ, ಬಾಗಲಕೋಟೆ:

ಪೊಲೀಸರು ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ಇರಬೇಕು. ನ್ಯಾಯ ಕೇಳಿಕೊಂಡು ಠಾಣೆಗೆ ಬರುವ ಜನರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅನುಚಿತವಾಗಿ ನಡೆದುಕೊಂಡರೆ ಅಂತ ಸಿಬ್ಬಂದಿ ವಿರುದ್ದ ಮೀನಾಮೇಷ ಎಣಿಸದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟನೆ ನೀಡಿರುವ ಅವರು ಪೊಲೀಸ್ ಠಾಣೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಪೊಲೀಸರು ಎನ್ನುವ ಅಹಂನಲ್ಲಿ ಯಾರು ನಡೆದುಕೊಳ್ಳಬಾರದು. ನೊಂದ ಜನರು ಠಾಣೆಗೆ ಬಂದಾಗ ಅವರನ್ನು ಕೂಡ್ರಿಸಿಕೊಂಡು ಅವರ ಸಮಸ್ಯೆಯನ್ನು ಶಾಂತವಾಗಿ ಆಲಿಸಬೇಕು. ದೂರು ಕೊಡಲು ಬಂದ ಜನರಿಗೆ ನಿಮ್ಮ ಮೇಲೆ ವಿಶ್ವಾಸ ಮೂಡಬೇಕು. ಆ ರೀತಿಯಲ್ಲಿ ವರ್ತನೆ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಕೆಲ ಪೊಲೀಸರು ದರ್ಪ ತೋರುತ್ತಾರೆ. ಗೌರಯುತವಾಗಿ ನಡೆದುಕೊಳ್ಳಲ್ಲ. ವಾಹನ ತಪಾಸಣೆ ನೆಪದಲ್ಲಿ ಅನಗತ್ಯ ಕಿರುಕುಳ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಇದೀಗ ಜಿಲ್ಲೆಯ ಎಲ್ಲ ಠಾಣೆಯ ಮುಖ್ಯಸ್ಥರು ಹಾಗೂ ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸರು ತಮಗೆ ಕರ್ತವ್ಯಕ್ಕೆ ನಿಗದಿ ಪಡಿಸಿದ ಸ್ಥಳವನ್ನು ಬಿಟ್ಟು ಬಾರ್, ದಾಬಾಗಳಲ್ಲಿ ಸಮವಸ್ತ್ರದ ಮೇಲೆ ಕಾಣಿಸಿಕೊಳ್ಳುವಂತಿಲ್ಲ. ಸಂಚಾರಿ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ರೈತರು, ಬೈಕ್ ಸವಾರರು, ವೃದ್ದರು, ಮಹಿಳೆಯರಿಗೆ ತೊಂದರೆ ಕೊಡಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಎಸ್ಪಿ ಜಯಪ್ರಕಾಶ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!