ವಿಮಾನದಲ್ಲೂ ಇರುಮುಡಿ: ಅಯ್ಯಪ್ಪನ ಭಕ್ತರಿಗೆ ವಿಮಾನಯಾನ ಭದ್ರತಾ ಮಂಡಳಿ ಸಿಹಿಸುದ್ದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಟ್ಯಂತರ ಭಕ್ತರ ಆರಾಧ್ಯದೈವ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ತೆರಳುವ ಭಕ್ತರು ಇನ್ನು ಮುಂದೆ ಪವಿತ್ರ ಇರುಮುಡಿಯನ್ನು ವಿಮಾನದಲ್ಲೂ ಒಯ್ಯಬಹುದು. ವಿಮಾನಯಾನ ಭದ್ರತಾ ಮಂಡಳಿ (ಬಿಸಿಎಎಸ್)ಈ ಅವಕಾಶ ಕಲ್ಪಿಸಿದೆ. ಶಬರಿಮಲೆ ಋತು ಸಮಾಪ್ತಿವರೆಗೆ ಈ ನಿಟ್ಟಿನಲ್ಲಿ ನಿಯಮಗಳನ್ನು ಸಡಿಲಗೊಳಿಸಿದೆ.

ಅಯ್ಯಪ್ಪ ಭಕ್ತರು ತುಪ್ಪ ತುಂಬಿದ ತೆಂಗಿನಕಾಯಿಯನ್ನು ಅಥವಾ ಇರುಮುಡಿಯನ್ನು ಶಬರೀಶನಿಗೆ ಸಮರ್ಪಿಸುವುದು ಅದೆಷ್ಟೋ ವರ್ಷಗಳಿಂದ ಸಾಗಿ ಬಂದ ಸಂಪ್ರದಾಯ. ತುಪ್ಪಯುಕ್ತ ತೆಂಗಿನಕಾಯಿ ಬೇಗನೆ ಉರಿಯುವ ಕಾರಣ, ಇರುಮುಡಿಯನ್ನು ವಿಮಾನದಲ್ಲಿ ಒಯ್ಯಲು ಇದುವರೆಗೆ ಅವಕಾಶವಿರಲಿಲ್ಲ. ಆದರೆ ಈ ಬಾರಿ ಸೀಮಿತ ಅವಧಿಗೆ ಭದ್ರತಾ ಮಂಡಳಿ ಅವಕಾಶ ಕಲ್ಪಿಸಿದೆ. ಏಕಕಾಲಕ್ಕೆ, ಇದೇ ಕಾರಣದಿಂದ ಹೆಚ್ಚುವರಿ ತಪಾಸಣಾ-ಭದ್ರತಾ ಕ್ರಮಗಳನ್ನೂ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರುಮುಡಿ ಹೊತ್ತು ನಡೆಯಲು ಕೆಲವು ಭಕ್ತರಿಗೆ ಕಷ್ಟವಾಗುವ ಕಾರಣ 2023ರ ಜ.20ರರವರೆಗೆ ವಿಮಾನಗಳಲ್ಲಿ ಈ ಅವಕಾಶ ಕಲ್ಪಿಸಲಾಗುವುದು.

ಈ ವೇಳೆ ಭಕ್ತರ ಬ್ಯಾಗೇಜ್‌ನ ಎಕ್ಸ್‌ರೇ ಮಾಡಲಾಗುವುದು, ಸ್ಫೋಟಕ ಪತ್ತೆ ಸಾಧನದಿಂದ ಪರಿಶೀಲನೆ ಮಾಡಲಾಗುವುದು. ವಾಯುಯಾನ ಇಲಾಖೆಯ ಭದ್ರತಾ ಪಡೆಯಿಂದ (ಎಎಸ್‌ಜಿ) ಭಕ್ತರ ಶಾರೀರಿಕ ತಪಾಸಣೆ ಕೂಡ ಕಡ್ಡಾಯ ನಡೆಯುವುದು ಎಂದು ಬಿಸಿಎಎಸ್ ಸುತ್ತೋಲೆಯೊಂದರಲ್ಲಿ ತಿಳಿಸಿದೆ.

ವಾರ್ಷಿಕ ಮಂಡಲಂ ಮತ್ತು ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆ ಗರ್ಭಗುಡಿಯನ್ನು ನ.16ರಂದು ತೆರೆಯಲಾಗಿದೆ. ನ.17ರಿಂದ ಉತ್ಸವ ಶುರುವಾಗಿದ್ದು, 41ದಿನಗಳ ಮಂಡಲ ಪೂಜೆಯು ಡಿ.೨೭ರಂದು ಸಮಾಪ್ತಿಯಾಗಲಿದೆ. ಮಕರವಿಳಕ್ಕು ಉತ್ಸವಕ್ಕಾಗಿ ಡಿ.30ರಂದು. ಜ.14 ಶ್ರೀಸ್ವಾಮಿಯ ಮಕರ ಜ್ಯೋತಿ ದರ್ಶನವಾಗುವುದು. ಮಕರ ಸಂಕ್ರಾಂತಿ ಉತ್ಸವವು ಜ.20ರಂದು ಸಮಾಪ್ತಿಗೊಳ್ಳುವುದು.
ಕೆಟ್ಟು ನಿರಕ್ಕಲ್

ಅಯ್ಯಪ್ಪ ಭಕ್ತರು ‘ಕೆಟ್ಟು ನಿರಕ್ಕಲ್’ ಸಂಪ್ರದಾಯ ಪ್ರಕಾರ ಇರುಮುಡಿ ಕಟ್ಟನ್ನು ತಲೆ ಮೇಲೆ ಹೊತ್ತುಕೊಂಡು ಶಬರಿಮಲೆಗೆ ತೆರಳುತ್ತಾರೆ. ಸನ್ನಿಧಾನದಲ್ಲಿ ತೆಂಗಿನ ಕಾಯೊಳಗಿನ ತುಪ್ಪವನ್ನು ಶಬರೀಶನಿಗೆ ಅಭಿಷೇಕ ಮಾಡಲಾಗುವುದು. ಇರುಮುಡಿಯಲ್ಲಿರುವ ಇತರ ತೆಂಗಿನಕಾಯಿಗಳನ್ನು ಸನ್ನಿಧಾನದಲ್ಲಿ ವಿವಿಧ ಪುಣ್ಯ ಸನ್ನಿಧಿಗಳಲ್ಲಿ ಒಡೆಯಲಾಗುತ್ತದೆ ಎಂದು ಶಬರಿಮಲೆ ದೇವಾಲಯದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!