ಗುಲ್ಮೊಹರ್ ಅಂದಕ್ಕೆ ವಾಹನ ಸವಾರರು ಫಿದಾ: ಫೋಟೋ ಶೂಟ್ ಸ್ಪಾಟ್ ಕೂಡಾ ಹೌದು!

– ಮಂಜುನಾಥ ಹೂಡೇಂ

ಕಾನ ಹೊಸಹಳ್ಳಿ: ಬೇಸಿಗೆ ಬಿಸಿಲ ಝಳದ ದಿನಗಳಲ್ಲೂ ಗುಲ್ ಮೊಹರ್ ಗಿಡಗಳ ಹೂವಿನ ಅಂದ ಮಾತ್ರ ಕಮರಿಲ್ಲ. ದಾರಿಹೋಕರು, ವಾಹನ ಸವಾರರನ್ನು ಹೂಗಳ ಸೊಬಗು ಕೈಬೀಸಿ ಕರೆಯುವಂತಿದೆ. ಹೂಗಳು ಉದುರಿ ಬಿದ್ದರಂತೂ ರಸ್ತೆಯುದ್ದಕ್ಕೂ ಹೂವಿನ ಹಾಸಿಗೆ. ಇದು ಸಮೀಪದ ಹೆದ್ದಾರಿ ಎಂ.ಬಿ. ಅಯ್ಯನಹಳ್ಳಿಯಿಂದ ಮೊಣಕಾಲ್ಮೂರು ಸಂಪರ್ಕಿಸುವ ಮಧ್ಯೆ ಚಿಕ್ಕಜೋಗಿಹಳ್ಳಿ ಗುಂಡು ಮುಣುಗು ಗ್ರಾಮಕ್ಕೆ ಹೋಗುವ ಮಾರ್ಗದ ಕಣ್ಸೆಳೆಯುವ ದೃಶ್ಯ. ರಸ್ತೆಯ ಎರಡೂ ಬದಿಯಲ್ಲಿ ಗುಲ್ ಮೊಹರ್ ಗಿಡಗಳಲ್ಲಿ ಕೆಂಪು ಹೂಗಳು ಬಿಟ್ಟಿದ್ದು ಇವುಗಳನ್ನು ನೋಡಿದ ವಾಹನ ಸವಾರರು ಮುಖದಲ್ಲಿ ಮಂದಹಾಸ ನಿಶ್ಚಿತ.

ಮನಃ ಸೂರೆಗೊಳಿಸುತ್ತಿವೆ ಗುಲ್ ಮೊಹರ್:
ಬೇಸಿಗೆ ಬಿಸಿಲ ತಾಪದ ದಿನಗಳಲ್ಲೂ ಮನಸ್ಸಿಗೆ ಆಹ್ಲಾದ ನೀಡವ ನಿಟ್ಟಿನಲ್ಲಿ ಪ್ರೇರಕ ಶಕ್ತಿಯಾಗುತ್ತಿವೆ ಈ ಗುಲ್ ಮೊಹರ್ ಹೂಗಳು. ಮನಸ್ಸು-ಕಂಗಳನ್ನು ಸೂರೆಗೊಳಿಸುತ್ತಿವೆ. ಬಯಲು ನಾಡಿನ ಬಿಸಿಲು ಪ್ರದೇಶದ ಗ್ರಾಮೀಣ ಭಾಗದ ರಸ್ತೆಯ ಬದಿಯಲ್ಲಿ ಈ ಗಿಡಗಳು ಹೂ ಬಿಟ್ಟು ಪ್ರಕೃತಿಯ ಸೌಂದರ್ಯ ಹೆಚ್ಚಿಸುವ ಜತೆಗೆ ರಸ್ತೆಗೆ ಮೆರಗು ತಂದಿದೆ. ಗುಲ್ ಮೊಹರ್ ಗಿಡಗಳು ನಾಲ್ಕಾರು ವರ್ಷಗಳಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಲ್ಲುತ್ತವೆ. ಕೆಂಪು ಬಣ್ಣದಿಂದ ಕಂಗೊಳಿಸುವ ಗುಲ್ಮೊಹರ್ ಹೂಗಳ ಕಲರವ ಜನರಲ್ಲಿ ಉಲ್ಲಾಸ ಉಂಟು ಮಾಡುತ್ತದೆ.

ಸವಾರ ಫೋಟೋ ಶೂಟ್ ಸ್ಪಾಟ್:
ಕೂಡ್ಲಿಗಿ ತಾಲೂಕಿನ ಗ್ರಾಮೀಣ ಪ್ರದೇಶದ ಕೆಲ ಯುವಕರು ತಮ್ಮ ಮೊಬೈಲ್ ಮತ್ತು ಕ್ಯಾಮೆರಾಗಳಲ್ಲಿ ಈ ಗಿಡದ ಕೆಳಗೆ-ಮೇಲೆ ಹತ್ತಿ ಫೋಟೋ ಶೂಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಗುಲ್ ಮೊಹರ ಗಿಡಗಳು ಫೋಟೋ ಶೂಟ್ಗೆ ಹೇಳಿ ಮಾಡಿಸಿದಂತಿವೆ ಎಂಬುದು ಫೋಟೋ ಪ್ರಿಯರ ಪುಲಕ.

ಗುಲ್ ಮೊಹರ್ ಹೂಗಳು ಈ ರಸ್ತೆಯ ಬದಿಯಲ್ಲಿ ಹೆಚ್ಚಾಗಿ ಹಾಕಿದ್ದೇವೆ, ಈ ಮರವನ್ನು ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ರಸ್ತೆ ಬದಿಯಲ್ಲಿ ಗಿಡಗಳನ್ನು ಹಾಕಿದ್ದೇವೆ. ಅವುಗಳ ಆರೈಕೆಗೆಂದೇ ಸಿಬ್ಬಂದಿ ಇದ್ದಾರೆ. ಜನರು ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿದಾಗಲೇ ನಮ್ಮ ಕಾರ್ಯಕ್ಕೆ ಸಾರ್ಥಕತೆ ಎಂದು ವಲಯ ಅರಣ್ಯಾಧಿಕಾರಿ ರೇಣುಕಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!