ಅಂತರಾಷ್ಟ್ರೀಯ ಮಟ್ಟಕ್ಕೆ ಅಡಿಕೆ ನಾರಿನ ಉತ್ಪನ್ನ: ಮನ್‌ ಕೀ ಬಾತ್‌ ನಲ್ಲಿ ಕರ್ನಾಟಕದ ದಂಪತಿಗೆ ಮೋದಿ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾನುವಾರದ ಮನ್‌ ಕೀ ಬಾತ್‌ ಸಂಚಿಕೆಯಲ್ಲಿ ಪ್ರಧಾನಿ ಮೋದಿ, ಮತ್ತೊಮ್ಮೆ ಕನ್ನಡಿಗರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಅಡಿಕೆ ನಾರಿನ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಶಿವಮೊಗ್ಗದ ದಂಪತಿಯ ಸಾಧನೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿಯವರು ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾದುದು ಎಂದು ಕೊಂಡಾಡಿದ್ದಾರೆ.

ಭಾರತದ ಸಾಂಪ್ರದಾಯಿಕ ಕೌಶಲ್ಯಗಳ ಬಗ್ಗೆ ಮಾತನಾಡುವ ವೇಳೆ ಕರ್ನಾಟಕದ ಶಿವಮೊಗ್ಗದ ದಂಪತಿ ಸುರೇಶ್‌ ಹಾಗೂ ಅವರ ಪತ್ನಿ ಮೈಥಿಲಿಯವರ ಪ್ರಯತ್ನವನ್ನು ಉಲ್ಲೇಖಿಸಿದ ಮೋದಿಯವರು ಅಡಿಕೆಯ ನಾರಿನಿಂದ ಅನೇಕ ಉತ್ಪನ್ನಗಳನ್ನು ಇಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಇವರ ಪ್ರಯತ್ನಗಳನ್ನು ಪ್ರಶಂಸಿದ್ದಾರೆ. “ಅಡಿಕೆ ನಾರಿನಿಂದ ತಟ್ಟೆ, ಕೈಚೀಲಗಳಿಂದ ಹಿಡಿದು ಅನೇಕ ಅಲಂಕಾರಿಕ ವಸ್ತುಗಳನ್ನು ಇವರು ತಯಾರು ಮಾಡುತ್ತಿದ್ದಾರೆ. ಇವರು ಉತ್ಪಾದಿಸಿದ ಚಪ್ಪಲಿಗಳನ್ನು ಜನರು ನೆಚ್ಚಿಕೊಂಡಿದ್ದಾರೆ. ಇಂದು ಅವರ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ನಮ್ಮ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಿದ್ದಂತೆ. ಭಾರತದ ಈ ಸಾಂಪ್ರದಾಯಿಕ ಜ್ಞಾನದಲ್ಲಿ, ಜಗತ್ತು ಸುಸ್ಥಿರ ಭವಿಷ್ಯದ ಮಾರ್ಗಗಳನ್ನು ಎದುರು ನೋಡುತ್ತಿದೆ. ನಾವೂ ಕೂಡ ಈ ದಿಸೆಯಲ್ಲಿ ಹೆಚ್ಚು ಹೆಚ್ಚು ಜಾಗೃತರಾಗಬೇಕು. ನಾವೇ ಇಂತಹ ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳನ್ನು ಬಳಸಿ ಇತರರಿಗೂ ಉಡುಗೊರೆಯಾಗಿ ನೀಡಬೇಕು. ಇದು ನಮ್ಮ ಗುರುತನ್ನು ಬಲಪಡಿಸುತ್ತದೆ, ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ” ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!