ಕರ್ತವ್ಯ ಪಥದ ರೂಪದಲ್ಲಿ ಹೊಸ ಯುಗ ಆರಂಭ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಸಾಹತುಶಾಹಿಯ ಸಂಕೇತ ‘ಕಿಂಗ್ಸ್‌ ವೇ’ ಒಂದು ಇತಿಹಾಸವಾಗಿರುತ್ತದೆ ಮತ್ತು ಅದನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ. ಈ ಮೂಲಕ ಕರ್ತವ್ಯ ಪಥದ ರೂಪದಲ್ಲಿ ಒಂದು ಹೊಸ ಯುಗ ಪ್ರಾರಂಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಸಾಹತುಶಾಹಿ ನೆನಪುಗಳನ್ನು ಅಳಿಸಿ ಹಾಕಲು ದೆಹಲಿಯ ಇಂಡಿಯಾ ಗೇಟ್‌ನ ಕರ್ತವ್ಯ ಪಥ(ರಾಜಪಥ) ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಭಾರತಕ್ಕೆ ಆತ್ಮವಿಶ್ವಾಸ ಸಿಕ್ಕಿದೆ. ಗುಲಾಮಗಿರಿ ಪ್ರತಿನಿಧಿಸುತ್ತಿದ್ದ ರಾಜಪಥ ಕಾಲಗರ್ಭ ಸೇರಿದೆ. ಕರ್ತವ್ಯಪಥ ಹೆಸರಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇದು ಸ್ವಾಭಿಮಾನದ ಸಂಕೇತವಾಗಿದೆ. ಕರ್ತವ್ಯಪಥವನ್ನು ಉದ್ಘಾಟಿಸಿದ್ದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರು ಮಹಾ ಮಾನವತಾವಾದಿಯಾಗಿದ್ದರು. ಬೋಸ್​ ಅವರು ವಿಶ್ವ ನಾಯಕ ಎಂದು ಹೆಸರಾಗಿದ್ದರು. ಸ್ವಾತಂತ್ರ್ಯ ನಂತರ ದೇಶ ನಡೆದಿದ್ದರೆ ಹೊಸ ಭಾರತವೇ ನಿರ್ಮಾಣವಾಗುತ್ತಿತ್ತು. ದೇಶ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿತ್ತು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಖಂಡ ಭಾರತದ ಮೊದಲ ಪ್ರಧಾನಿ ನೇತಾಜಿ ಬೋಸ್​ ಆಗಿದ್ದರು. ಅವರು ದೇಶ ಸ್ವಾತಂತ್ರ್ಯ ಪಡೆದ ನಂತರ ಧ್ವಜಾರೋಹಣ ಮಾಡಿದ ಮೊದಲಿಗರು. ಸ್ವಾತಂತ್ರ್ಯ ನಂತರ ನೇತಾಜಿ ಅವರನ್ನು ಮರೆತುಬಿಟ್ಟರು ಎಂದರು.

ಗುಲಾಮಿತನದ ಮಾನಸಿಕತೆಯನ್ನು ನಾವು ಬಿಡಬೇಕು. ಕಿಂಗ್ ಜಾರ್ಜ್ ಪ್ರತಿಮೆ ಜಾಗದಲ್ಲಿ ನೇತಾಜಿ ಪ್ರತಿಮೆ ತಲೆಎತ್ತಿದೆ. ಬ್ರಿಟಿಷ್ ಕಾಲದಲ್ಲಿ ಸ್ಥಾಪಿಸಲಾಗಿದ್ದ 5ನೇ ಜಾರ್ಜ್​ ಪುತ್ಥಳಿ ಜಾಗದಲ್ಲಿ ದೇಶದ ಹೆಮ್ಮೆಯ ಸಂಕೇತವಾದ ನೇತಾಜಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ಇದು ಕೇವಲ ಪ್ರತಿಮೆಯಲ್ಲ, ಗುಲಾಮಿತನವನ್ನು ಮೆಟ್ಟಿ ನಿಲ್ಲುವ ಸ್ವಾಭಿಮಾನವಾಗಿದೆ ಎಂದು ಬಣ್ಣಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!