ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದ ಆರು ಪ್ರಕರಣಗಳಲ್ಲಿ ದೋಷಿಯಾಗಿದ್ದ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಶನಿವಾರ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶುಕ್ರವಾರ ಶಿಕ್ಷೆ ಪ್ರಮಾಣದ ಅರ್ಜಿಯನ್ನು ವಿಚಾರಣೆ ನಡೆಸಿ ಶನಿವಾರ ಶಿಕ್ಷೆಯನ್ನು ಪ್ರಕಟಿಸುವುದಾಗಿ ತಿಳಿಸಿದರು.
ಇಂದು ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ ಅವರು, 3100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆ ಮಾಡಿದ್ದಾರೆ. ಹೀಗಾಗಿ ಆರೋಪಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ಗರಿಷ್ಠ ದಂಡ ವಿಧಿಸುವಂತೆ ಮನವಿ ಮಾಡಿದರು.
ಸತೀಶ್ ಸೈಲ್ ಪರ ವಕೀಲ ಮೂರ್ತಿ ಡಿ ನಾಯ್ಕ್ ಅವರು, ಶಾಸಕ ಸತೀಶ್ ಸೈಲ್ ಗೆ ಅನಾರೋಗ್ಯ ಇದೆ. ಸದ್ಯ ಸತೀಶ್ ಸೈಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯ ಕಾರಣದಿಂದ ಬೇಲ್ ಕೂಡ ಪಡೆದಿದ್ದರು. ಹೀಗಾಗಿ ಕನಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಸತೀಶ್ ಸೈಲ್ ಆರೋಗ್ಯಕ್ಕೆ ಸಂಬಂಧಿಸಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು.
ಗುರುವಾರ ಸತೀಶ್ ಸೈಲ್ ಅವರನ್ನು ಕಸ್ಟಡಿಗೆ ಪಡೆಯದಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಒಮ್ಮೆ ತೀರ್ಪು ನೀಡಿದ ಮೇಲೆ ಇದಕ್ಕೆ ಅವಕಾಶ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು.
ಈ ಬೆನ್ನಲ್ಲೇ ನ್ಯಾಯಾಲಯದಲ್ಲಿ ಹಾಜರಿದ್ದ ಶಾಸಕ ಸತೀಶ್ ಸೈಲ್, ಅರಣ್ಯಾಧಿಕಾರಿ ಮಹೇಶ್ ಬಿಳಿಯೆ, ಚೇತನ್ ಷಾ, ಸೋಮಶೇಖರ್, ಜನಾರ್ದನ ರೆಡ್ಡಿಯ ಆಪ್ತ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಕೆವಿ ಗೋವಿಂದರಾಜುನನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದರು.
2009-10ರ ನಡುವೆ ನಡೆದಿದ್ದ ಬೆಲೆಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದ ಆರು ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ 2013ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲಿಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರೋದನ್ನು ಪತ್ತೆ ಹಚ್ಚಿತ್ತು. 2012ರಲ್ಲಿ ಸೈಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಬಿಐ, 2013ರಲ್ಲಿ ಬಂಧಿಸಿತ್ತು. ಆಗ ಸತೀಶ್ ಸೈಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಲ್ಲಿ ಇದ್ದರು.