May 16, 2026
Saturday, May 16, 2026
spot_img

ಬೆಳಗಾವಿ ವಂಚನೆ ಪ್ರಕರಣ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅರೆಸ್ಟ್

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿಯಲ್ಲಿ ಅನಧಿಕೃತ ಬಡ್ಡಿ ಹಾಗೂ ಹೂಡಿಕೆ ವ್ಯವಹಾರ ನಡೆಸಿದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಮೊದಲ ಹಂತದ ತನಿಖೆಯಲ್ಲೇ ₹50 ಕೋಟಿಗೂ ಅಧಿಕ ಅಕ್ರಮ ವ್ಯವಹಾರ ನಡೆದಿರುವುದು ಪತ್ತೆಯಾಗಿದ್ದು, ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದಂತೆ, ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಶಿವಂ ಅಸೋಸಿಯೇಟ್ಸ್ ಮೂಲಕ ಹಣ ಹೂಡಿಕೆ ಮಾಡಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಈ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದೆ.

ಶೇ 36 ಬಡ್ಡಿ ಆಮಿಷ :
₹1 ಲಕ್ಷ ಠೇವಣಿ ಇಟ್ಟರೆ ಮಾಸಿಕ ಶೇ 36ರಷ್ಟು ಬಡ್ಡಿ” ನೀಡುವುದಾಗಿ ಪತ್ರಿಕಾ ಜಾಹೀರಾತುಗಳ ಮೂಲಕ ಜನರನ್ನು ಆಕರ್ಷಿಸಲಾಗಿತ್ತು. ಹೆಚ್ಚಿನ ಲಾಭದ ಆಸೆಯಿಂದ ಸಾವಿರಾರು ಜನರು ಹಣ ಹೂಡಿಕೆ ಮಾಡಿದ್ದು, ಒಟ್ಟು ಠೇವಣಿಯ ಮೊತ್ತ ಸಾವಿರಾರು ಕೋಟಿಗಳಲ್ಲಿರಬಹುದು ಎಂದು ಶಂಕಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ “ಕೆಪಿಐಡಿ–ಬಡ್ಸ್ ಆ್ಯಕ್ಟ್” ಅಡಿಯಲ್ಲಿ ವಿಶೇಷ ತನಿಖಾ ಶಾಖೆ ತೆರೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊಗಳು ಮತ್ತು ಮಾರುಕಟ್ಟೆ ಇಂಟಲಿಜೆನ್ಸ್ ಆಧರಿಸಿ ಶಿವಂ ಅಸೋಸಿಯೇಟ್ಸ್ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ.

ಇದನ್ನೂ ಓದಿ:

ಪ್ರತಿ ತಿಂಗಳು ಒಂದೇ ಖಾತೆಯಿಂದ ₹300–₹400 ಕೋಟಿ ವ್ಯವಹಾರ ನಡೆದಿದೆ. ಯಾವುದೇ ಆರ್ಬಿಐ ಅಥವಾ ಸಹಕಾರ ಸಂಘ ನಿಯಮಗಳನ್ನು ಪಾಲಿಸಲಾಗಿಲ್ಲ. ದೊಡ್ಡ ಪ್ರಮಾಣದ ಹಣಕಾಸು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಪವಿಭಾಗಾಧಿಕಾರಿ ಶ್ರವಣ ನಾಯಕ್ ನೇತೃತ್ವದ ತಂಡ ಸುಮಾರು 24 ಗಂಟೆಗಳ ಕಾಲ ಪರಿಶೀಲನೆ ನಡೆಸಿ, ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಎಫ್ಐಆರ್ ದಾಖಲಿಸಿ ಶಿವಾನಂದ ನೀಲಣ್ಣವರನ್ನು ಬಂಧಿಸಿತು.

ಬಡ್ಸ್ ಆ್ಯಕ್ಟ್ ಸೆಕ್ಷನ್–21 ಹಾಗೂ ಕೆಪಿಐಡಿ ಸೆಕ್ಷನ್–9 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಾನಂದ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನನ್ನ ಬಳಿ 15 ಸಾವಿರ ಬಂದೂಕುಗಳಿವೆ, 2028ಕ್ಕೆ ನಾನು ಸಿಎಂ ಆಗಿ ತೋರಿಸುತ್ತೇನೆ ಎಂದು ಹೇಳಿಕೊಂಡಿದ್ದ ವಿಡಿಯೊಗಳು ಹರಿದಾಡಿದ್ದವು.

ಮೇ 17ರಂದು ಬೆಳಗಾವಿಯಲ್ಲಿ 25 ಸಾವಿರ ಜನರನ್ನು ಸೇರಿಸಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರಾದ್ಯಂತ ಕಟೌಟ್ ಮತ್ತು ಪೋಸ್ಟರ್ಗಳು ಹಾಕಲಾಗಿದ್ದವು. ತನಿಖೆ ಆರಂಭವಾದ ಬಳಿಕ ಪಾಲಿಕೆ ಅಧಿಕಾರಿಗಳು ಕಾರ್ಯಕ್ರಮ ರದ್ದುಪಡಿಸಿ ಎಲ್ಲಾ ಪೋಸ್ಟರ್ ತೆರವುಗೊಳಿಸಿದರು.

ಯಾರು ಶಿವಾನಂದ ನೀಲಣ್ಣವರು?:

ಮೂಲತಃ ಹುಬ್ಬಳ್ಳಿಯ ಉಣಕಲ್ ನಿವಾಸಿ ದ್ವಿತೀಯ ಪಿಯು ಶಿಕ್ಷಣ ಆರಂಭದಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡುತ್ತಿದ್ದ ನಂತರ ಆಟೊದಲ್ಲಿ ಐಸ್ಕ್ರೀಮ್ ಮಾರಾಟ ಬಳಿಕ ಐಸ್ಕ್ರೀಮ್ ಕಾರ್ಖಾನೆ ಆರಂಭ ಮಾಡಿದ್ದಾನೆ. ಅವರು “ಅಕ್ಯೂಮೆನ್” ಎಂಬ ಆ್ಯಪ್ ಅಭಿವೃದ್ಧಿಪಡಿಸಿ ಅದರ ಮೂಲಕ ಜನರಿಂದ ಹೂಡಿಕೆ ಸಂಗ್ರಹಿಸುತ್ತಿದ್ದರು. ತನಿಖಾ ತಂಡದ ಪ್ರಕಾರ, ಸಾವಿರಾರು ಕೋಟಿ ರೂಪಾಯಿ ಈ ಆ್ಯಪ್ ಮೂಲಕ ಹರಿದಾಡಿದ್ದು, ಹೂಡಿಕೆದಾರರಲ್ಲಿ ಮಾಜಿ ಸೈನಿಕರ ಸಂಖ್ಯೆಯೂ ಹೆಚ್ಚಾಗಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿಯೇ ಶಿವಾನಂದ ನೀಲಣ್ಣವರಗೆ ಸೇರಿದ ಕಛೇರಿಗಳು ಹಾಗೂ ಮನೆಯ ಮೇಲೆ ದಾಳಿ ತಮ್ಮ ಪೊಲೀಸರು ದಾಳಿ ಮಾಡಿ ಅಗತ್ಯೆ ದಾಖಲಾತಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಶಿವಾನಂದ ನೀಲಣ್ಣವರ ಅವರನ್ನು ಬಂಧನ ಮಾಡಲಾಗಿದೆ. ಬಹುಕೋಟಿ ಆರೋಪದ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಮುಗಿಯುವ ವರೆಗೂ ಬಂಧನದಲ್ಲಿಯೇ ಇರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷ್ನರ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !