ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮಂಗಳವಾರ ಪಟ್ಟು ಹಿಡಿದ ಪರಿಣಾಮ, ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಕೆಲಕಾಲ ತೀವ್ರ ಗದ್ದಲ ಹಾಗೂ ವಾಗ್ವಾದದ ವಾತಾವರಣ ನಿರ್ಮಾಣವಾಯಿತು.
ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವ ವಿಚಾರವನ್ನು ಕಾಂಗ್ರೆಸ್ ಸದಸ್ಯರು ಪ್ರಸ್ತಾಪಿಸಿ, ತಕ್ಷಣವೇ ಗೊತ್ತುವಳಿ ಸ್ವೀಕರಿಸುವಂತೆ ಒತ್ತಾಯಿಸಿದರು. ಈ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಪ್ರತ್ಯೇಕ ಸೂಚನೆ ಬರುವವರೆಗೆ ಕಾಯುವ ಅಗತ್ಯವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಚಾರದಲ್ಲಿ ಮಹಾನಗರ ಪಾಲಿಕೆ ತನ್ನ ನಿಲುವನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.ಎಂಇಎಸ್ ಸದಸ್ಯರಿಂದ ವಿರೋಧಕಾಂಗ್ರೆಸ್ ಸದಸ್ಯರ ಬೇಡಿಕೆಗೆ ಎಂಇಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗೊತ್ತುವಳಿ ಸ್ವೀಕಾರದ ವಿಚಾರದಲ್ಲಿ ಪರ-ವಿರೋಧದ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಸಭೆಯ ವಾತಾವರಣ ಬಿಸಿಯೇರಿತು. ಕೆಲಕಾಲ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದ್ದರಿಂದ ಸಭೆಯಲ್ಲಿ ಸದ್ದುಗದ್ದಲ ಹೆಚ್ಚಾಯಿತು.ಇದೇ ವೇಳೆ ಕರ್ನಾಟಕ ಪರ ಗೊತ್ತುವಳಿ ವಿಚಾರದಲ್ಲಿ ಬಿಜೆಪಿ ಸದಸ್ಯರು ಮೌನ ವಹಿಸಿರುವುದಕ್ಕೂ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯ ವಿಚಾರದಲ್ಲಿ ಎಲ್ಲರೂ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಪಾಲಿಕೆ ಸಭೆಯಲ್ಲೇ ಗೊತ್ತುವಳಿ ಅಂಗೀಕರಿಸುವ ಮೂಲಕ ಮಹಾನಗರ ಪಾಲಿಕೆಯ ನಿಲುವನ್ನು ದಾಖಲಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.‘ಸರ್ಕಾರದ ಸೂಚನೆಗಾಗಿ ಕಾಯಬೇಕು’ ಎಂದ ಉಪ ಮೇಯರ್ ಹಣಮಂತ ಕೊಂಗಾಲಿಗೊತ್ತುವಳಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದೆ. ಸರ್ಕಾರದಿಂದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಂದರು.
ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಸರ್ಕಾರದ ಸೂಚನೆಗಾಗಿ ಕಾಯುವ ಅಗತ್ಯವಿಲ್ಲ. ನಾವು ಸುಪ್ರೀಂ ಕೋರ್ಟ್‌ನ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಆದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಇಂದೇ ಪಾಲಿಕೆ ಸಭೆಯಲ್ಲಿ ಸ್ವೀಕರಿಸಬೇಕು” ಎಂದು ಪಟ್ಟು ಹಿಡಿದರು.ಮೇಯರ್ ರೂಲಿಂಗ್‌ಗೂ ಸದಸ್ಯರ ವಿರೋಧಈ ಸಂದರ್ಭದಲ್ಲಿ ಮೇಯರ್ ಪ್ರೀತಿ ಕಾಮಕರ ಅವರು ಮಧ್ಯಪ್ರವೇಶಿಸಿ, ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಸರ್ಕಾರದ ಅಧೀನದಲ್ಲಿದೆ. ಪಾಲಿಕೆಯು ನಾಡು-ನುಡಿ ಜಲ ಭಾಷೆಗೆ ಸದಾ ಬದ್ಧವಾಗಿದೆ ಎಂದು ರೂಲಿಂಗ್ ನೀಡಿದರು.ಆದರೆ ಮೇಯರ್ ಅವರ ರೂಲಿಂಗ್‌ಗೂ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಗೊತ್ತುವಳಿ ಸ್ವೀಕಾರವನ್ನು ಮುಂದೂಡದೆ ಸಭೆಯಲ್ಲಿಯೇ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದ ಹಾಗೂ ಸದ್ದುಗದ್ದಲ ಮತ್ತಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಲು ಮೇಯರ್ ಪ್ರೀತಿ ಕಾಮಕರ ನಿರ್ಧರಿಸಿದರು. ಬಳಿಕ ಅವರು ಸಭೆಯಿಂದ ಹೊರನಡೆದರು.ಗೊತ್ತುವಳಿ ವಿಚಾರಕ್ಕೆ ಮತ್ತೆ ಕಾವುಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಅಧಿಕೃತವಾಗಿ ದಾಖಲಿಸುವಂತೆ ಕಳೆದ ಕೆಲವು ತಿಂಗಳಿಂದ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ಮಹಾನಗರ ಪಾಲಿಕೆಯನ್ನು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ, ಮಂಗಳವಾರದ ಸಾಮಾನ್ಯ ಸಭೆಯ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.ಗೊತ್ತುವಳಿ ಸ್ವೀಕಾರದ ವಿಚಾರದಲ್ಲಿ ಪಾಲಿಕೆ ಸಭೆಯೊಳಗೇ ಸದಸ್ಯರ ನಡುವೆ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಮುಂದಿನ ಸಭೆಯಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಬರುವ ಸಾಧ್ಯತೆ ಇದೆ. ಕರ್ನಾಟಕ ಪರ ಗೊತ್ತುವಳಿಯನ್ನು ಅಂಗೀಕರಿಸುವಂತೆ ಕಾಂಗ್ರೆಸ್ ಸದಸ್ಯರು ತಮ್ಮ ಒತ್ತಾಯ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.



