July 21, 2026
Tuesday, July 21, 2026
spot_img

ಬೆಳಗಾವಿ ಹಾಲು ಒಕ್ಕೂಟಕ್ಕೆ ₹23 ಕೋಟಿ ಲಾಭ: ರೈತರಿಗೆ ಉಚಿತ ಜೀವವಿಮೆ, ಸಹಾಯಧನ ಘೋಷಣೆ

ಹೊಸದಿಗಂತ ವರದಿ ​ಬೆಳಗಾವಿ:

ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಬೆಮುಲ್) ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ ₹23 ಕೋಟಿ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಸೋಮವಾರ ಬೆಳಗಾವಿ ​ನಗರದ ಗಾಂಧಿ ಭವನದಲ್ಲಿ ಜರುಗಿದ ಬೆಳಗಾವಿ ಹಾಲು ಒಕ್ಕೂಟದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಕ್ಕೂಟದ ಬೆಳವಣಿಗೆಗೆ ಶ್ರಮಿಸುತ್ತಿರುವ ರೈತರಿಗಾಗಿ ಹಲವು ಪ್ರಮುಖ ಕ್ಷೇಮಾಭಿವೃದ್ಧಿ ಯೋಜನೆಗಳು ಹಾಗೂ ಸಹಾಯಧನಗಳನ್ನು ಘೋಷಣೆ ಮಾಡಿದರು. ​ರೈತರ ಹಿತರಕ್ಷಣೆಗೆ ಹೊಸ ಯೋಜನೆಗಳು ​ಹೈನುಗಾರರ ಹಿತ ಕಾಯಲು ಒಕ್ಕೂಟ ಬದ್ಧವಾಗಿದೆ ಎಂದರು.

​ಆರೋಗ್ಯ ಹಾಗೂ ಜೀವವಿಮೆ: ಒಕ್ಕೂಟದ ಪ್ರತಿಯೊಬ್ಬ ಸದಸ್ಯ ರೈತರಿಗೆ ₹1 ಲಕ್ಷ ಉಚಿತ ಜೀವವಿಮೆ ಸೌಲಭ್ಯ ಒದಗಿಸಲಾಗುವುದು. ಜೊತೆಗೆ, ಅನಾರೋಗ್ಯದ ಸಮಸ್ಯೆ ಎದುರಾದರೆ ಚಿಕಿತ್ಸೆಗಾಗಿ ₹60 ಸಾವಿರ ವರೆಗೆ ಧನಸಹಾಯ ನೀಡುವ ಯೋಜನೆಯನ್ನು ತಕ್ಷಣದಿಂದಲೇ ಜಾರಿಗೆ ತರಲಾಗುವುದು.

​ಹೈನುಗಾರಿಕೆ ಉಪಕರಣಗಳಿಗೆ ಸಬ್ಸಿಡಿ: ರೈತರಿಗೆ ಹೈನುಗಾರಿಕೆಗೆ ಅಗತ್ಯವಿರುವ ಯಂತ್ರೋಪಕರಣಗಳು ಹಾಗೂ ಸಲಕರಣೆಗಳ ಖರೀದಿಗೆ ಒಕ್ಕೂಟದಿಂದ ಭಾರಿ ಸಬ್ಸಿಡಿ (ಸಹಾಯಧನ) ನೀಡಲಾಗುವುದು.

​ದನ-ಕರುಗಳಿಗೆ ಇನ್ಶೂರೆನ್ಸ್: ಜಾನುವಾರುಗಳ ರಕ್ಷಣೆಗಾಗಿ ಆಕಳು ಹಾಗೂ ಎಮ್ಮೆಗಳಿಗೆ ಉಚಿತ-ಸಹಾಯಧನ ಸಹಿತ ಇನ್ಶೂರೆನ್ಸ್ (ವಿಮೆ) ಮಾಡಿಸಲಾಗುವುದು.

​ಉತ್ಪಾದನಾ ಗುರಿ: ಪ್ರಸ್ತುತ ದಿನಕ್ಕೆ 2.75 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡಲು ರೈತರು ಶ್ರಮಿಸಬೇಕು.
​ಪೂರ್ಣ ಸಹಕಾರ: ಎಮ್ಮೆ ಹಾಗೂ ಹಸುಗಳ ಹಾಲು ಉತ್ಪಾದನೆ ಹೆಚ್ಚಿಸಲು ರೈತರಿಗೆ ಬೇಕಾದ ತಾಂತ್ರಿಕ, ಮೇವಿನ ಹಾಗೂ ಆರ್ಥಿಕ ಸೌಲಭ್ಯಗಳನ್ನು ಒಕ್ಕೂಟದಿಂದ ಸಂಪೂರ್ಣವಾಗಿ ಒದಗಿಸಲಾಗುವುದು ಎಂದಿದ್ದಾರೆ.

ಮುಂದಿನ 3 ವರ್ಷಗಳಲ್ಲಿ ಬೃಹತ್ ಬೆಳವಣಿಗೆಯ ಕನಸು
​ಹಾಲು ಉತ್ಪಾದಕರಿಗೆ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಆಡಳಿತ ಮಂಡಳಿ ಸಿದ್ಧವಿದೆ. ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಬೆಳಗಾವಿ ಹಾಲು ಒಕ್ಕೂಟವನ್ನು ರಾಜ್ಯದಲ್ಲೇ ಮಾದರಿಯಾದ ದೊಡ್ಡ ಮಟ್ಟದ ಒಕ್ಕೂಟವಾಗಿ ಬೆಳೆಸುವ ಬಲವಾದ ಆಸೆ ಹೊಂದಿದ್ದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಆಶಯ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !