ಬಿ.ಶ್ರೀರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ, ಆನಂದ್ ಸಿಂಗ್ ಗೆ ಕೊಪ್ಪಳ: ಬೆಂಬಲಿಗರಲ್ಲಿ ಅಸಮಾಧಾನ

ಹೊಸದಿಗಂತ ವರದಿ,ಬಳ್ಳಾರಿ:‌

ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ, ಸಚಿವ ಆನಂದ್ ಸಿಂಗ್ ಅವರಿಗೆ ಕೊಪ್ಪಳ ಹಾಗೂ ವಿಜಯನಗರ ನೂತನ ಜಿಲ್ಲೆಯ ಉಸ್ತುವಾರಿಯನ್ನು ಸಚಿವೆ ಶಶಿಕಲಾ‌ ಜೊಲ್ಲೆ ಅವರಿಗೆ ನೀಡಲಾಗಿದ್ದು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಭಾರಿ ಚೆರ್ಚೆಗೆ ಗ್ರಾಸವಾಗಿದೆ.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರನ್ನು ಬಳ್ಳಾರಿ ‌ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎನ್ನುವ ಕೂಗು ಆರಂಭದಿಂದ ಕೇಳಿ ‌ಬರುತ್ತಿತ್ತು. ಈ ಕುರಿತು‌ ಇತ್ತೀಚೆಗೆ ‌ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು, ಸರ್ಕಾರಕ್ಕೆ ‌ಒತ್ತಾಯಿಸಿ ಗಮನಸೆಳೆದಿದ್ದರು. ಇದರ ಬೆನ್ನಲ್ಲೇ ಸರ್ಕಾರ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನಾಗಿ‌ ನೇಮಕ ಮಾಡಿ ಆದೇಶ ಹೊರಡಿಸಿರುವುದು ಅವರ ಬೆಂಬಲಿಗರಿಗೆ ಹಾಗೂ ಕಾರ್ಯಕರ್ತರಿಗೆ ಆನೆಬಲ ಬಂದಂತಾಗಿದೆ. ಆದರೇ, ವಿಜಯನಗರ ‌ನೂತನ ಜಿಲ್ಲೆ ಸ್ಥಾಪನೆ ಪ್ರಮುಖ ರೂವಾರಿ ಹಾಲಿ ಜಿಲ್ಲಾ ಉಸ್ತುವಾರಿ ಆನಂದ್ ಸಿಂಗ್ ಅವರಿಗೆ ಕೊಪ್ಪಳ ಉಸ್ತುವಾರಿ ನೀಡಿ, ವಿಜಯನಗರ ನೂತನ ಜಿಲ್ಲೆಗೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವುದು ನಾನಾ ಚೆರ್ಚೆಗೆ ಗ್ರಾಸವಾಗಿದೆ.

ಸಚಿವ ಬಿ.ಶ್ರೀರಾಮುಲು ಬೆಂಬಲಿಗರಲ್ಲಿ ಸಂಭ್ರಮ:
ಕಳೆದ 15 ವರ್ಷಗಳ ಬಳಿಕ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ದೊರೆತಿದ್ದು. ಅವರ ಬೆಂಬಲಿಗರಿಗೆ ಹಾಗೂ‌ ಕಾರ್ಯಕರ್ತರಲ್ಲಿ ಸಂಭ್ರಮ‌ ಮುಗಿಲು ಮುಟ್ಟಿದೆ. ಈ ನೇಮಕ ಮುಂಬರುವ ಚುನಾವಣೆ ದೃಷ್ಟಿಯಿಟ್ಟುಕೊಂಡು ನಡೆದಿದೆ ಎನ್ನುವ ಚೆರ್ಚೆಗಳು ನಡೆದಿದ್ದು, ಏನೇ ಆದರೂ ಸುಮಾರು ವರ್ಷಗಳ ಬಳಿಕ ‌ನಮ್ಮ‌ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ದೊರೆತಿದೆ ಎಂದು ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಸಚಿವ ಶ್ರೀರಾಮುಲು ಅವರು, ಚಿತ್ರದುರ್ಗ ‌ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿದ್ದರೂ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ನೀಡಿರುವುದು ಬೆಂಬಲಿಗರಿಗೆ‌ ಆನೆಬಲ‌ ಬಂದಂತಾಗಿದೆ.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬದಲಾವಣೆಯಲ್ಲಿ ಬಹುತೇಖ ಯಾವ ಸಚಿವರಿಗೂ ತವರು ಜಿಲ್ಲೆಯ ಉಸ್ತುವಾರಿಯನ್ನು ನೀಡಿಲ್ಲ. ಇದು ಗುಜರಾತ್ ರಾಜ್ಯದ ಮಾದರಿ ಎಂದು ವಿಶ್ಲೇಷಿಸಲಾತ್ತಿದೆ. ಆದರೂ ಇದರಲ್ಲಿಯೇ ಸಚಿವ ಶ್ರೀರಾಮುಲು ಅವರು ಜಾಕ್ ಪಾಟ್ ಹೊಡೆದು ಗಮನಸೆಳೆದ್ದಾರೆ.

ಸಚಿವ ಆನಂದ್‌ ಸಿಂಗ್ ಅವರಿಗೆ ಹಿನ್ನೆಡೆ: ವಿಜಯನಗರ ‌ನೂತನ ಜಿಲ್ಲೆಯ ಪ್ರಮುಖ ರೂವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ‌ನೀಡಿರುವುದು ಬೆಂಬಲಿಗರಲ್ಲಿ‌, ಕಾರ್ಯಕರ್ತರಲ್ಲಿ ಅಸಮಧಾನ ಹೊಗೆಯಾಡುತ್ತಿದೆ. ವಿಜಯನಗರ ಜಿಲ್ಲೆಗೆ ಬೆಳಗಾವಿ‌ ಜಿಲ್ಲೆಯ ಶಶಿಕಲಾ ಜೊಲ್ಲೆ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಿರುವುದು ಯ್ಯಾವ ನ್ಯಾಯ ಎಂದು‌ ಬೆಂಬಲಿಗರು ಅಸಮಧಾನ‌ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಸಚಿವ ಆನಂದ್ ಸಿಂಗ್ ಅವರಿಗೆ ಹಿನ್ನಡೆಯಾದರೆ. ಸಚಿವ ಶ್ರೀರಾಮುಲು‌ ಅವರಿಗೆ ಸಹಕಾರಿಯಾಗಿದೆ.

ಮುಂದಿನ ಚುನಾವಣೆಗೆ ಅನುಕೂಲ:
ಕಳೆದ 15 ವರ್ಷಗಳ ಬಳಿಕ ಸಚಿವ ಶ್ರೀರಾಮುಲು ‌ಅವರಿಗೆ ತವರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ದೊರೆತಿದ್ದು, ಕಾರ್ಯಕರ್ತರಲ್ಲಿ ಸಂತಸ, ಸಂಭ್ರಮ ಮನೆ ಮಾಡಿದೆ, ಗಣಿನಾಡು ಬಳ್ಲಾರಿ ಜಿಲ್ಲೆಯಲ್ಲಿ ಪಕ್ಷದ ಮತ್ತು ಬೆಂಬಲಿಗರ ಬೆಳವಣಿಗೆಗೆ ಪೂರಕ ‌ವಾತವರಣ ಸೃಷ್ಟಿಸಿದೆ. ಅಲ್ಲದೆ ಶ್ರೀರಾಮುಲು ಅವರು ಮುಂಬರುವ ಚುನಾವಣೆಯಲ್ಲಿ ಮತ್ತೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಲು ವೇದಿಕೆ ರಚಿಸಿಕೊಳ್ಳಲೂ ಸಹ ಉಸ್ತುವಾರಿ ಸಚಿವ ಸ್ಥಾನ ಅನುಕೂಲಕರವಾಗಲಿದೆ ಎನ್ನುವ ‌ಮಾತುಗಳು ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!