ಹೊಸದಿಗಂತ ವರದಿ,ಬಳ್ಳಾರಿ:
ನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಅಲ್ಲಿಪುರದ ಮಹಾದೇವ ತಾತ ಮಠ ಹತ್ತಿರದ ತುಂಗಭದ್ರಾ ಜಲಾಶಯದ ಮೂಲ ಮೇಲ್ಮಟ್ಟ ಹಾಗೂ ಕೆಳಮಟ್ಟದ (ಎಚ್ ಎಲ್ ಸಿ ಹಾಗೂ ಎಲ್ ಎಲ್ ಸಿ) ಕಾಲುವೆಗಳಿಗೆ ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಶನಿವಾರ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಮಲೆನಾಡು ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿದೆ. ಈ ಭಾಗದ ಲಕ್ಷಾಂತರ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ 84 ಟಿಎಂಸಿ ನೀರು ಹರಿದು ಬಂದಿದ್ದು, ಶೇ.70 ರಷ್ಟು ಜಲಾಶಯ ಭರ್ತಿಯಾಗಿರುವುದು ಸಂತಸ ಮೂಡಿಸಿದೆ. ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಕಾಲುವೆಗಳಿಗೆ ನೀರು ಹರಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಹೆಚ್ಚಿನ ಮಳೆ, ಬೆಳೆ ಆಗುವುದರ ಮೂಲಕ ರೈತರ ಬದುಕು ಸಮೃದ್ಧಿಯಾಗಬೇಕು, ರೈತರು ಆರ್ಥಿಕವಾಗಿ ಇನ್ನಷ್ಟು ಹೆಚ್ಚು ಸದೃಢರಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿರುವೆ. ನಮ್ಮ ಶಾಸಕರೊಂದಿಗೆ ಗಂಗೆಗೆ ಬಾಗಿನ ಅರ್ಪಿಸಿಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಡೂರು ಶಾಸಕ ಈ.ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್, ಸೇರಿದಂತೆ ಇತರರು ಇದ್ದರು.