September 7, 2026
Monday, September 7, 2026
spot_img

ಮಗು ಹುಟ್ಟಿದ ಬಳಿಕ ಕೈಕೊಟ್ಟಿದ್ದ ಪ್ರಿಯತಮ: ಪೊಲೀಸರ ಕಾರ್ಯಾಚರಣೆ, ಡಿಎಸ್‌ಎಸ್‌ ಮಧ್ಯಸ್ಥಿಕೆಯಲ್ಲಿ ಮದುವೆ

ಹೊಸದಿಗಂತ ವರದಿ ಹಾಸನ :

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಒಂದು ವರ್ಷ ಸಂಸಾರ ನಡೆಸಿ ಮಗುವಾದ ಬಳಿಕ ಕೈಕೊಟ್ಟು ಪರಾರಿಯಾಗಿದ್ದ ಯುವಕನನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದ ಬಳಿಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಮಧ್ಯಪ್ರವೇಶಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ವಿವಾಹ ನೆರವೇರಿಸುವ ಮೂಲಕ ನೊಂದ ಯುವತಿಗೆ ನ್ಯಾಯ ಒದಗಿಸಿದ್ದಾರೆ.

ಆಲೂರು ತಾಲೂಕಿನ ಬೀರಕನಹಳ್ಳಿ ಗ್ರಾಮದ ರಾಜು ಎಂಬ ಯುವಕ, ನಿಲುವಾಗಿಲು ಗ್ರಾಮದ ಅನ್ನಪೂರ್ಣ ಎಂಬ ಯುವತಿಯನ್ನು ಪ್ರೀತಿಸಿದ್ದನು. ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ಸುಮಾರು ಒಂದು ವರ್ಷ ಕಾಲ ಜೊತೆಯಲ್ಲಿದ್ದು ಸಂಸಾರ ನಡೆಸಿದ್ದನು. ಈ ನಡುವೆ ಇವರಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಆದರೆ ಇತ್ತೀಚೆಗೆ ರಾಜು, ಯುವತಿ ಹಾಗೂ ಹಸುಗೂಸನ್ನು ಅನಾಥವಾಗಿ ಬಿಟ್ಟು ದಿಢೀರನೆ ಪರಾರಿಯಾಗಿದ್ದನು.

ನೊಂದ ಯುವತಿ ದೂರು ದಾಖಲಿಸಿ ಯುವಕನನ್ನು ಪತ್ತೆಹಚ್ಚಿದ ಪೊಲೀಸರು:

ಮೋಸಹೋದ ಯುವತಿ ಅನ್ನಪೂರ್ಣ ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಪರಾರಿಯಾಗಿದ್ದ ಯುವಕ ರಾಜುನನ್ನು ಪತ್ತೆಹಚ್ಚಿದ್ದರು. ಬಳಿಕ ಯುವತಿಯು ತನಗಾದ ಅನ್ಯಾಯದ ಕುರಿತು ದಲಿತ ಸಂಘರ್ಷ ಸಮಿತಿಯ ಮುಖಂಡರಿಗೂ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಮೊರೆಹೋಗಿದ್ದರು.

ಅಂಬೇಡ್ಕರ್ ಪುತ್ಥಳಿ ಎದುರು ವಿವಾಹ:

ವಿಷಯ ತಿಳಿದ ಡಿಎಸ್‌ಎಸ್ ಮುಖಂಡರು ಯುವಕನಿಗೆ ಬುದ್ಧಿವಾದ ಹೇಳಿ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಎದುರು, ಸಂಘಟನೆಯ ಪ್ರಮುಖ ಮುಖಂಡರ ಸಮ್ಮುಖದಲ್ಲಿ ರಾಜು ಮತ್ತು ಅನ್ನಪೂರ್ಣ ಅವರ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸಂಕಷ್ಟದಲ್ಲಿದ್ದ ತಾಯಿ ಮತ್ತು ಮಗುವಿಗೆ ಸಾಮಾಜಿಕ ರಕ್ಷಣೆ ದೊರಕಿಸಿಕೊಟ್ಟ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಕಾರ್ಯ ಪ್ರವೃತ್ತರಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಅಶೋಕ್ ಪುನೀತ್ ಪೂರ್ಣೇಂದ್ರ ಹಾಗೂ ಸುನೀಲ್ ಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ

ಈ ಸಂದರ್ಭದಲ್ಲಿ ಡಿಎಸ್‌ಎಸ್‌ ತಾಲ್ಲೂಕು ಅಧ್ಯಕ್ಷ ಬಸವರಾಜು ಗೇಕರವಳ್ಳಿ ,ಧರ್ಮಪ್ಪ ಬ್ಯಾಬ,ರವಿ ನಿಲುವಾಗಿಲು ರಂಗಯ್ಯ ಅಜ್ಜೇನಹಳ್ಳಿ ಮಂಜುನಾಥ್ ಕಾಮತಿ ರವಿ ಚಿಕ್ಕಕಣಗಾಲ್ ಮತ್ತು ಪದಾಧಿಕಾರಿಗಳು ಹಾಗೂ ಕುಟುಂಬಗಳ ಹಿರಿಯರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !