ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೋಧ ಕಾರ್ಯಾಚರಣೆ ಸಮಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 18ಕ್ಕೆ ವಿಚಾರಣೆಗೆ ಮುಂದೂಡಿತು.
ಎಸ್.ವಿ.ರಾಜು ಅವರು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠದ ಮುಂದೆ , ಕಲ್ಲಿದ್ದಲು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಜನವರಿ 2ರಂದು ನಡೆಸಿದ ದಾಳಿಯ ವೇಳೆ ಪಶ್ಚಿಮ ಬಂಗಾಳ ಸರ್ಕಾರ, ಸಿಎಂ ಮಮತಾ ಬ್ಯಾನರ್ಜಿ ಅವರು ನಮ್ಮ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಇ.ಡಿ. ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಬುಧವಾರ ವಾದ ಮಂಡಿಸಿದರು.
ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ ಮಲ್ಹೋತ್ರಾ ಕೂಡ ಪ್ರತಿ ವಾದಿಸಿ, ಇ.ಡಿ.ಯು ಬಲವಂತವಾಗಿ ಮತ್ತು ಉದ್ದೇಶಪೂರ್ವಕವಾಗಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದರು.
ಜನವರಿ 2ರಂದು ಕಲ್ಲಿದ್ದಲು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ಈ ದಾಳಿ ಮಾಹಿತಿ ಅರಿತ ಸಿಎಂ ಮಮತಾ ಬ್ಯಾನರ್ಜಿ ಅವರು ಐ ಪ್ಯಾಕ್ ಕಚೇರಿಗೆ ಆಗಮಿಸಿ ಇ.ಡಿ. ಅಧಿಕಾರಿಗಳ ಒಪ್ಪಿಗೆ ಪಡೆಯದೆ ಕಚೇರಿಯೊಳಗೆ ಬಲವಂತವಾಗಿ ನುಗ್ಗಿ, ಅಲ್ಲಿದ್ದ ಕೆಲ ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದರು.
ಕೇಂದ್ರ ತನಿಖಾ ಸಂಸ್ಥೆಯಾದ ಇಡಿ ವಿರುದ್ಧವೇ ಬಂಗಾಳ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಆದರೆ, ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಜೊತೆಗೆ, ಅಂದಿನ ಘಟನಾವಳಿಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆಯೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.



