ಬೆಂಗಳೂರು ಬಂದ್‌: ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾವೇರಿ ನೀರಿನ ವಿಚಾರ ಬೆಂಗಳೂರು ಬಂದ್‌ ಕರೆ ನೀಡಲಾಗಿದ್ದು, ಈ ಹಿನ್ನೆಲೆ ನಾಳೆ ಶಾಲಾ ಮಕ್ಕಳಿಗೆ ಸಮಸ್ಯೆ ಆಗುವುದನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರದ ಎಲ್ಲ ಶಾಲೆಗಳಿಗೆ ಜಿಲ್ಲಾಧಿಕಾರಿ ದಯಾನಂದ್‌ ರಜೆಯನ್ನು ಘೋಷಣೆ ಮಾಡಿದ್ದಾರೆ.

ಈ ಕುರಿತು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ (ಡಿಡಿಪಿಐ) ಸೂಚನೆ ನೀಡಿರುವ ಜಿಲ್ಲಾಧಿಕಾರಿ ದಯಾನಂದ್‌ ಅವರು, ನಾಳೆ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲು ಶಿಫಾರಸ್ಸು ಮಾಡಿದ್ದರಿಂದ ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ನಾಳೆ ಬೆಂಗಳೂರು ನಗರದಾದ್ಯಂತ ಎಲ್ಲ ಖಾಸಗಿ ಶಾಲೆಗಳು ಬಂದ್‌ ಆಗಲಿವೆ. ಇನ್ನು ಈಗಾಗಲೇ ಹಲವು ಖಾಸಗಿ ಕಾಲೇಜುಗಳು ಮಕ್ಕಳ ಕಾಳಜಿಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಣೆ ಮಾಡಿದ್ದವು.

ಬೆಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ
ನಾಳೆ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳು‌ ಮುಂದೂಡಿಕೆ ಮಾಡಲಾಗಿದೆ. ಪದವಿಯ 2ನೇ ಹಾಗೂ 4 ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ನಾಳೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಸೆ.27ರಂದು ನಿಗದಿಗೊಳಿಸಿ ಮುಂದೂಡಿಕೆ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಕುಲಸಚಿವರು ಆದೇಶ ಹೊರಡಿಸಿದ್ದಾರೆ.

ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದ ರುಪ್ಸಾ
ನಾಳೆ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ರುಪ್ಸಾ ಸಂಘಟನೆಯಿಂದ ರಜೆ ಘೋಷಣೆ ‌ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!