ಹೊಸದಿಗಂತ ಡಿಜಿಟಲ್ ಡೆಸ್ಕ್
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟಾನ್ ತಂಡಗಳ ನಡುವೆ ನಡೆದ ವಿವೋ ಪ್ರೊ ಕಬಡ್ಡಿ ಸೀಸನ್ 9ರ 9ನೇ ಪಂದ್ಯ ರೋಮಾಂಚನಕಾರಿಯಾಗಿದ್ದು ಅಭಿಮಾನಿಗಳನ್ನು ಸೀಟಿನಂಚಿಗೆ ತಂದು ಕೂರಿಸಿತ್ತು. ಕೊನೆಯ ಕ್ಷಣದಲ್ಲಿ ಮ್ಯಾಜಿಕ್ ಮಾಡಿದ ಬುಲ್ಸ್ 41-39 ಅಂಕಗಳಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿ ರೋಚಕ ಗೆಲುವು ಒಲಿಸಿಕೊಂಡಿತು.
ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಅಬ್ಬರ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು. ಬುಲ್ಸ್ ರೈಡರ್ ಗಳು- ಡಿಫೆಂಡರ್ ಗಳ ಸಾಂಘಿಕ ಪ್ರದರ್ಶನಕ್ಕೆ ಪುಣೇರಿ ಆಟಗಾರರು ನಿರುತ್ತರವಾಗಿದ್ದರು. ತವರಿನ ಅಭಿಮಾನಿಗಳ ಮುಂದೆ ಅದ್ಭುತ ಆಟ ಪ್ರದರ್ಶಿಸಿದ ಬೆಂಗಳೂರು ಮೊದಲಾರ್ಧದ ಅಂತ್ಯದ ವೇಳೆಗೆ 28-14 ರಲ್ಲಿ ಬರೋಬ್ಬರಿ 14 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಆರಾಮಾಗಿ ಪಂದ್ಯಗೆಲ್ಲುವ ಭರವಸೆಯಲ್ಲಿ ವಿರಾಮಕ್ಕೆ ಹೋಯಿತು.
ದ್ವಿತೀಯಾರ್ಧದಲ್ಲಿ ಬುಲ್ ನಿರೀಕ್ಷೆಯೇ ಮಾಡದ ರೀತಿ ಕಮ್ ಬ್ಯಾಕ್ ಮಾಡಿದ ಪಲ್ಟಾನ್ ಪಾಯಿಂಟ್ ಗಳ ಮೇಲೆ ಪಾಯಿಂಟ್ ಕಲೆಹಾಕಿತು. ರೈಡರ್‌ಗಳಾದ ಅಸ್ಲಾಮ್ ಇನಾಮದಾರ್ ಮತ್ತು ಮೋಹಿತ್ ಗೋಯತ್ ಅವರು ಪುಣೇರಿ ಪಲ್ಟನ್ ಪರ ಅಸಾಧಾರಣ ರೀತಿಯಲ್ಲಿ ತಿರುಗಿಬಿದ್ದರು. ದ್ವಿತೀಯಾರ್ಧದ 32 ನೇ ನಿಮಿಷದಲ್ಲಿ ಬುಲ್ ತಂಡವನ್ನು ಆಲ್-ಔಟ್ ಮಾಡುವ ಮೂಲಕ 26-33 ರಲ್ಲಿ ಪುಣೇರಿ ಬುಲ್ಸ್ ಸ್ಕೋರ್‌ಗೆ ಹತ್ತಿರವಾಯಿತು.
37 ನೇ ನಿಮಿಷದಲ್ಲಿ ಪುಣೇರಿ ಪಲ್ಟಾನ್ ಬುಲ್ ಅನ್ನು ಮತ್ತೊಮ್ಮೆ ಆಲ್ ಔಟ್ ಮಾಡಿ ಸ್ಕೋರ್ 35-35ರಲ್ಲಿ ಸಮಬಲಗೊಳಿಸಿತು. ಪಂದ್ಯ ಮುಗಿಯಲು ಮುಗಿಯಲು 3 ನಿಮಿಷಗಳಿಗಿಂತ ಕಡಿಮೆ ಇರುವಾಗ ಬುಲ್ಸ್ ಎಚ್ಚೆತ್ತುಕೊಂಡಿತು. ವಿಕಾಸ್ ಕಾಂಡೋಲಾ ನಿರ್ಣಾಯಕ ರೇಡ್ ಪಾಯಿಂಟ್ ತಂದು ಬುಲ್ಸ್‌ಗೆ 36-35 ರಲ್ಲಿ ಮುನ್ನಡೆ ದೊರಕಿಸಿಕೊಟ್ಟರು. ಕೊನೆಯ ರೇಡ್ ನಲ್ಲಿ ಎರಡೂ ತಂಡಗಳ ನಡುವೆ ಕೇವಲ ಒಂದು ಅಂಕದ ವ್ಯತ್ಯಾಸವಿತ್ತು. ಈ ವೇಳೆ ಬುಲ್ಸ್ 40- ಪುಣೇರಿ 39 ಅಂಕಗಳಲ್ಲಿದ್ದವು. ಈ ರೋಚಕ ಹಂತದಲ್ಲಿ ರೈಡಿಂಗ್ ಗೆ ಇಳಿದ ಭರತ್ ತಪ್ಪು ಮಾಡಿದ್ದರೆ ಪಂದ್ಯ ಟೈ ಆಗುವ ಅಥವಾ ಪುಣೇರಿಗೆ ಇನ್ನೊಂದು ರೈಡ್ ಲಭಿಸುವ ಸಾಧ್ಯತೆ ಇತ್ತು. ಆದರೆ ಭರತ್ ಸಮಯವನ್ನು ಕೊಲ್ಲುವ ಜೊತೆಗೆ ಟಚ್ ಪಾಯಿಂಟ್ ಕೂಡ ಕಲೆಹಾಕುವ ಮೂಲಕ ಬೆಂಗಳೂರು ತಂಡಕ್ಕೆ ರೋಚಕ ಗೆಲುವು ದೊರಕಿಸಿಕೊಟ್ಟರು.
ಪಂದ್ಯದ ವಿವರ:
ಪುಣೇರಿ ಪಲ್ಟನ್
ಅತ್ಯುತ್ತಮ ರೈಡರ್ – ಅಸ್ಲಂ ಇನಾಮದಾರ್ (12 ರೈಡ್ ಪಾಯಿಂಟ್ಸ್)
ಅತ್ಯುತ್ತಮ ಡಿಫೆಂಡರ್ – ಗೌರವ್ ಖತ್ರಿ (4 ಟ್ಯಾಕಲ್ ಪಾಯಿಂಟ್ಸ್)
ಬೆಂಗಳೂರು ಬುಲ್ಸ್
ಅತ್ಯುತ್ತಮ ರೈಡರ್ – ಭರತ್ (12 ರೈಡ್ ಪಾಯಿಂಟ್‌ಗಳು)
ಅತ್ಯುತ್ತಮ ಡಿಫೆಂಡರ್ – ಸೌರಭ್ ನಂದಲ್ (3 ಟ್ಯಾಕಲ್ ಪಾಯಿಂಟ್ಸ್)
ವಿವೋ ಪ್ರೊ ಕಬಡ್ಡಿ ಸೀಸನ್ 9 ಲೈವ್ ಅನ್ನು ಎಲ್ಲಿ ವೀಕ್ಷಿಸಬೇಕು?
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ vivo ಪ್ರೊ ಕಬಡ್ಡಿ ಸೀಸನ್ 9 ರಿಂದ ಎಲ್ಲಾ ಲೈವ್ ಕ್ರಿಯೆಯನ್ನು ವೀಕ್ಷಿಸಿ ಮತ್ತು Disney+Hotstar ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.