ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಮತ್ತೊಮ್ಮೆ ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ. ಹಿರಿಯ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ನಾಳೆ (ಗುರುವಾರ) ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರು ಚಲೋ’ ಬೃಹತ್ ಪ್ರತಿಭಟನೆ ನಡೆಯಲಿದೆ.
ನಾಲ್ಕೂ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಯು ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿಟ್ಟಿದೆ:
2020ರಿಂದ 2023ರವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಪಾವತಿ.
2024ರಿಂದ ಅನ್ವಯವಾಗುವಂತೆ ಹೊಸ 4 ವರ್ಷಗಳ ವೇತನ ಒಪ್ಪಂದ ಜಾರಿ.
ನಾಳೆ ಸಂಜೆ 4 ಗಂಟೆಯೊಳಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಸುದ್ದಿಗೋಷ್ಠಿಯ ಮೂಲಕ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲು ನೌಕರರ ಸಂಘಟನೆಗಳು ಸಜ್ಜಾಗಿವೆ.
ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆಯೇ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಅವರು ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ. ಮುಷ್ಕರದಲ್ಲಿ ಭಾಗವಹಿಸುವಂತಿಲ್ಲ ಮತ್ತು ಕರ್ತವ್ಯಕ್ಕೆ ಗೈರಾದರೆ ‘ನೋ ವರ್ಕ್ ನೋ ಪೇ’ ನಿಯಮ ಅನ್ವಯವಾಗಲಿದೆ ಎಂದು ಆದೇಶಿಸಿದ್ದಾರೆ.
ಸಾರ್ವಜನಿಕ ಸಾರಿಗೆಯಲ್ಲಿ ವ್ಯತ್ಯಯವಾಗದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಅನಿವಾರ್ಯ ಕಾರಣಗಳ ಹೊರತಾಗಿ ಯಾವುದೇ ಸಿಬ್ಬಂದಿಗೆ ರಜೆ ನೀಡಬಾರದು ಮತ್ತು ಬಸ್ ಸಂಚಾರ ಸುಗಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.



