September 27, 2026
Sunday, September 27, 2026
spot_img

ಬೆಂಗಳೂರಿಗೆ ಮೊದಲ ಟನಲ್ ರಸ್ತೆ ಭಾಗ್ಯ: ಹೆಬ್ಬಾಳ ಸಂಚಾರ ದಟ್ಟಣೆಗೆ ಇಂದೇ ಸಿಗಲಿದೆ ಮುಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಟನಲ್ (ಸುರಂಗ) ರಸ್ತೆ ಕಾಮಗಾರಿಗೆ ಇಂದು ಅಧಿಕೃತವಾಗಿ ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗಿನ ಈ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ 9:30 ಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಸಾರಿಗೆ ಸಚಿವ ಬೈರತಿ ಸುರೇಶ್ ನಿನ್ನೆಯೇ ಸ್ಥಳ ಪರಿಶೀಲನೆ ನಡೆಸಿ ಸಿದ್ಧತೆಗಳನ್ನು ಖಾತ್ರಿಪಡಿಸಿದ್ದಾರೆ.

2.2 ಕಿ.ಮೀ ಉದ್ದದ ಪೈಲಟ್ ಪ್ರಾಜೆಕ್ಟ್

ಇದು ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಮಹತ್ವದ ಪೈಲಟ್ ಯೋಜನೆಯಾಗಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿಯು ಈ ಟೆಂಡರ್ ಪಡೆದುಕೊಂಡಿದ್ದು, ಒಟ್ಟು 1199 ಕೋಟಿ ರೂ. ವೆಚ್ಚದಲ್ಲಿ 2.2 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ.

18 ತಿಂಗಳಲ್ಲಿ ಕಾಮಗಾರಿ ಪೂರ್ಣ

ಈ ಕಾಮಗಾರಿಯನ್ನು ಕೇವಲ 18 ತಿಂಗಳಲ್ಲಿ ಮುಗಿಸಲು ಗಡುವು ನೀಡಲಾಗಿದೆ. ಅತಿ ವೇಗವಾಗಿ ನಡೆಯಲಿರುವ ಈ ಯೋಜನೆಯಿಂದ ಹೆಬ್ಬಾಳ, ಯಲಹಂಕ ಹಾಗೂ ಬ್ಯಾಟರಾಯನಪುರ ಕಡೆಗೆ ಸಂಚರಿಸುವ ಸಾರ್ವಜನಿಕರಿಗೆ ಶೇ. 50 ರಷ್ಟು ಟ್ರಾಫಿಕ್ ಮುಕ್ತಿ ಸಿಗಲಿದೆ.

ಆಸ್ತಿ-ಪಾಸ್ತಿಗಳಿಗೆ ಧಕ್ಕೆಯಿಲ್ಲ!

ಯೋಜನೆಯ ವಿಶೇಷವೆಂದರೆ, ಸುರಂಗ ಮಾರ್ಗ ಇರುವುದರಿಂದ ಮೇಲ್ಭಾಗದ ಯಾವುದೇ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ತೊಂದರೆಯಾಗುವುದಿಲ್ಲ. ಜನಹಿತಕ್ಕಾಗಿ ಜಾರಿಗೆ ತರುತ್ತಿರುವ ಈ ಯೋಜನೆಗೆ ವಿರೋಧ ಪಕ್ಷದ ನಾಯಕರು ರಾಜಕೀಯ ಮಾಡದೆ ಸಹಕಾರ ನೀಡಬೇಕು ಎಂದು ಸಚಿವ ಬೈರತಿ ಸುರೇಶ್ ಮನವಿ ಮಾಡಿದ್ದಾರೆ.

Must Read