August 13, 2026
Thursday, August 13, 2026
spot_img

ಎಲ್ಲಾ ದುಡ್ಡು ನಮ್ಮ ತಲೆ ಮೇಲೆ ಹಾಕ್ತೀರಾ? ಸ್ವಿಗ್ಗಿ ವಿರುದ್ಧ ಸಿಡಿದ ಬೆಂಗಳೂರು ಹೋಟೆಲ್ ಮಾಲೀಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಮುಖ ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ವಿರುದ್ಧ ಬೆಂಗಳೂರಿನ ಹೊಟೇಲ್‌ ಮಾಲೀಕರು ಸಿಡಿದೆದ್ದಿದ್ದಾರೆ.

ತಮ್ಮ ಬೇಡಿಕೆಗಳು ಈಡೇರದೇ ಹೋದರೆ ಆಗಸ್ಟ್‌ 15ರ ನಂತರ ಸ್ವಿಗ್ಗಿ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಮಾಲೀಕರ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನ್ಯಾಯಯುತ ಹಾಗೂ ಪಾರದರ್ಶಕ ಪಾಲುದಾರಿಕೆಗಾಗಿ ಸ್ವಿಗ್ಗಿ ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿದೆ.

ಸಮಸ್ಯೆ ಏನು?
ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆಯಿಂದ ದುಬಾರಿ ಕಮಿಷನ್‌, ಕಡ್ಡಾಯ ಡಿಸ್ಕೌಂಟ್‌ ಹಾಗೂ ಇನ್ನಿತರ ಸಮಸ್ಯೆಗಳಿವೆ. ಈ ರೀತಿ ಹಣಕ್ಕೆ ಕತ್ತರಿ ಹಾಕುತ್ತಾ ಹೋದರೆ ಹೊಟೇಲ್‌ ಉದ್ಯಮಕ್ಕೆ ಭಾರೀ ಪೆಟ್ಟು ಬೀಳುತ್ತಿದೆ.ಹೋಟೆಲ್ ಮಾಲೀಕರ ಲಾಭಾಂಶ ತೀವ್ರವಾಗಿ ಕುಸಿಯುತ್ತಿದ್ದು, ಸ್ವಿಗ್ಗಿಯ ಏಕಪಕ್ಷೀಯ ಒಪ್ಪಂದದ ನಿಯಮಗಳಿಂದಾಗಿ ತಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಟೇಲ್‌ ಮಾಲೀಕರ ಒಪ್ಪಿಗೆ ಇಲ್ಲದೆ ಗ್ರಾಹಕರಿಗೆ ಡಿಸ್ಕೌಂಟ್‌ ಕೊಡಬಾರದು. ಜಾಹೀರಾತು ಶುಲ್ಕ ಹಾಗೂ ಪೇಮೆಂಟ್ ಗೇಟ್‌ವೇ ಶುಲ್ಕಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು.

ಗ್ರಾಹಕರು ದೂರು ನೀಡಿದ ತಕ್ಷಣ ಹೊಟೇಲ್‌ನ ಖಾತೆಯಿಂದ ಹಣ ಕಟ್‌ ಮಾಡಬಾರದು. ಆಹಾರ ಸಿದ್ಧವಾದ ಮೇಲೆ ಆರ್ಡರ್‌ ಕ್ಯಾನ್ಸಲ್‌ ಆದರೆ ಆ ನಷ್ಟದ ಹೊರೆಯನ್ನು ಹೊಟೇಲ್‌ ಮೇಲೆ ಹಾಕಬಾರದು. ಪ್ರತಿಯೊಂದು ಕಡಿತಗಳ ಬಗ್ಗೆಯೂ ಸ್ಪಷ್ಟವಾದ ಸೆಟ್ಲ್ಮೆಂಟ್ ವರದಿ ನೀಡಬೇಕು.ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಪ್ರತಿ ರೆಸ್ಟೋರೆಂಟ್‌ಗೆ ಪ್ರತ್ಯೇಕ ಸಂಪರ್ಕಾಧಿಕಾರಿಯನ್ನು (SPOC) ನೇಮಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !